ಕಲಾವಿದ ಹಿರೇಮಠರಿಂದ ಮತದಾನ ಜಾಗೃತಿ
ಧಾರವಾಡ: ಈ ಚಿತ್ರ ನೋಡಿ ಯಾವುದೋ ಒಂದು ರಾಜಕೀಯ ಪಕ್ಷದ ಪರವಾಗಿ ಮತ ಪ್ರಚಾರ ಎಂದು ಕೊಳ್ಳಬೇಡಿ. ಇದು ಅರ್ಹ ಮತದಾರರಿಗೆ ಮತದಾನದ ಹಕ್ಕಿದ್ದು, ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಜಾಗೃತಿ ಮೂಡಿಸುವ ಯತ್ನ. ಮತದಾರರ ಜಾಗೃತಿಗೆ ಚುನಾವಣಾ ಆಯೋಗ ಈ ಬಾರಿ ವಿಶೇಷ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಇಲ್ಲಿನ ಕಲಾವಿದ ಮಂಜುನಾಥ ಹಿರೇಮಠ ತಮ್ಮ ಬೈಕ್ ಮೂಲಕ ಮತದಾನ ಮಾಡುವಂತೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಬೈಕ್ಗೆ ವಿಧಾನಸೌಧದ ಚಿತ್ರವನ್ನು ಹಚ್ಚಿ ಅದರ ಮೇಲೆ ಮೇ 5ರಂದು ಮತದಾನ. ಮತ ಹಾಕುವುದನ್ನು ತಪ್ಪಿಸಬೇಡಿ ಎಂದು ಬರೆದುಕೊಂಡು ಸುತ್ತಾಡುತ್ತ ಸ್ವಯಂ ಪ್ರೇರಿತವಾಗಿ ಜಾಗೃತಿ ಕೈಗೊಂಡಿದ್ದಾರೆ.