ಹೆಲಿಕಾಪ್ಟರ್ ಇಳಿಸಲು ವಿರೋಧ
ಕನ್ನಡಪ್ರಭ ವಾರ್ತೆ ಧಾರವಾಡ ಮೇ 3 -
ಕ್ರಿಕೆಟ್ ಟೂರ್ನಮೆಂಟ್ ನಡೆಸಲು ಮುಂಚಿತವಾಗಿ ಪರವಾನಗಿ ಪಡೆದಿದ್ದ ಕವಿವಿ ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೆಲಿಕಾಪ್ಟರ್ ಇಳಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ನಡೆಸಿದ್ದನ್ನು ವಿರೋಧಿಸಿದ ಕರ್ನಾಟಕ ವಿವಿ ವಿದ್ಯಾರ್ಥಿಗಳು, ಕೆಲವು ಹೊತ್ತು ಪ್ರತಿಭಟಿಸಿದರು.
ಕವಿವಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಗುರುವಾರದಿಂದ ಮೂರು ದಿನಗಳ ಕಾಲ ಯುಪಿಎಲ್ ಕ್ರಿಕೆಟ್ ಟೂರ್ನಮೆಂಟ್ ನಡೆಸಲು ಕುಲಪತಿಗಳಿಂದ ಅನುಮತಿ ಪಡೆದು ಪಂದ್ಯಗಳನ್ನು ನಡೆಸುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಬಿಜೆಪಿ ಕಾರ್ಯಕರ್ತರು, 'ಹೆಲಿಕಾಪ್ಟರ್ ಇಳಿಸಲು ಜಿಲ್ಲಾಧಿಕಾರಿ ಅನುಮತಿ ಪಡೆದಿದ್ದೇವೆ' ಎಂದು ಏಕಾಏಕಿ ಲ್ಯಾಂಡ್ ಮಾರ್ಕ್ ಮಾಡಿ, ಬಿಜೆಪಿ ಧ್ವಜಗಳನ್ನು ನೆಟ್ಟರು. ವಿದ್ಯಾರ್ಥಿಗಳು ಸಿಟ್ಟಿಗೆದ್ದು, 'ಮುಂಚಿತವಾಗಿಯೇ ಕುಲಪತಿಗಳಿಂದ ಅನುಮತಿ ಪಡೆದು ಇಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಹೆಲಿಕಾಪ್ಟರ್ ಇಳಿಸಲು ಬಿಡುವುದಿಲ್ಲ' ಎಂದು ಪಟ್ಟು ಹಿಡಿದು, ಒಂದು ಗಂಟೆಯೊಳಗೆ ಪಕ್ಷದ ಧ್ವಜಗಳನ್ನು ತೆಗೆಯುವಂತೆ ಗಡವು ನೀಡಿದ್ದರು. ಜೋಶಿ ಧಾರವಾಡದ ಪ್ರವಾಸವನ್ನೇ ರದ್ದು ಮಾಡಿದ್ದರಿಂದ ಕಾರ್ಯಕರ್ತರು ಬಂದ ದಾರಿಗೆ ಸುಂಕವಿಲ್ಲ ಎಂದು ಮನೆ ದಾರಿ ಹಿಡಿದರು. ವಿದ್ಯಾರ್ಥಿಗಳು ತಮ್ಮ ಆಟ ಮುಂದುವರಿಸಿದರು.