ಅಂಗವಿಕಲನಿಗೂ ಚುನಾವಣೆ ಡ್ಯೂಟಿ
ಹುಬ್ಬಳ್ಳಿ: ಮುಳ್ಳಿನಿಂದ ಪರಿಹಾರವಾಗಬೇಕಾದ ಸಮಸ್ಯೆಗೆ ಕೊಡಲಿ ಬಳಸಿದರು ಎನ್ನುವುದಕ್ಕೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಯ ನಡವಳಿಕೆ ಈ ಘಟನೆಗೆ ಅನ್ವರ್ಥಕ ಹೇಳಿಕೆಯಾಗುತ್ತದೆ!
ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲೇಬೇಕಾದ ಗಂಭೀರ ಕಾಯಿಲೆಗೆ ಒಳಗಾಗಿ ವಿಶ್ರಾಂತಿ ಪಡೆಯಬೇಕಿದ್ದ ಪ್ರಾಥಮಿಕ ಶಾಲಾ ಶಿಕ್ಷಕನನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಚುನಾವಣಾ ಆಯೋಗ ಕೊನೆ ದಿನ ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ. ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವುದಕ್ಕೆ ಶತಪ್ರಯತ್ನ ಮಾಡುತ್ತಿದ್ದ ಹಳೇ ಹುಬ್ಬಳ್ಳಿ ಕಿಲ್ಲಾ ಉರ್ದು ಶಾಲೆ ಸಹ ಶಿಕ್ಷಕ ಗದಿಗೆಪ್ಪ ಕುಬಿಹಾಳ ಮತದಾನಕ್ಕೆ ಮುನ್ನಾ ದಿನ (ಶನಿವಾರ) ಉಪವಿಭಾಗಾಧಿಕಾರಿ ವಿನಾಯಿತಿ ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಕನ್ನಡಪ್ರಭ ಬಳಿ ಅಳಲು ತೊಡಿಕೊಂಡಿದ್ದ ಕುಬಿಹಾಳ, ಮಾ. 20, 2013ರಂದು ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಸಿಎಫ್ಡಬ್ಲ್ಯೂ ಆಸ್ಪತ್ರೆಗೆ ದಾಖಲಾಗಿ ಮಾ. 23ರಂದು ಥೈರಾಯಿಡ್ ಶಸ್ತ್ರಚಿಕಿತ್ಸೆಗೆ ಒಳಗಾದ ಮೇಲೆ ವೈದ್ಯರು ಕನಿಷ್ಠ ಒಂದು ತಿಂಗಳು ವಿಶ್ರಾಂತಿಗೆ ಶಿಫಾರಸು ಮಾಡಿದ್ದರು.
ಏತನ್ಮಧ್ಯೆ ಕೂಬಿಹಾಳ ಅವರು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚುನಾವಣಾ ಆಯೋಗದಿಂದ ಚುನಾವಣಾ ಕರ್ತವ್ಯಕ್ಕೆ ನಿಮ್ಮನ್ನು ನಿಯೋಜಿಸಲಾಗಿದೆ ಎಂದು ಆದೇಶ ಬಂದಿದ್ದು, ಈ ಕುರಿತು ತಮ್ಮ ಶಾಲೆಯ ಮುಖ್ಯಾಧ್ಯಾಪಕಿ ಆರ್.ಎಚ್. ಬಾಗಲಕೋಟ ಅವರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುತ್ತಿರುವ ಸಹಶಿಕ್ಷಕ ಅನಾರೋಗ್ಯದಿಂದಾಗಿ ಬೆಂಗಳೂರಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ವಿನಂತಿಸಿಕೊಳ್ಳುವ ಪ್ರಯತ್ನ ಮಾಡಿದ್ದರಾದರೂ ಜಿಲ್ಲಾಧಿಕಾರಿ ಸಿಬ್ಬಂದಿಯ ಬೇಜವಾಬ್ದಾರಿತನದ ಪರಿಣಾಮವಾಗಿ ಕೂಬಿಹಾಳ ಕೊನೆ ಕ್ಷಣದವರೆಗೆ ಕರ್ತವ್ಯದಿಂದ ಮುಕ್ತಿ ಪಡೆಯುವುದಕ್ಕೆ ಹರಸಾಹಸ ಪಡಬೇಕಾಯಿತು.
ಅರ್ಜಿ ಹಿಡಿದು ಅಲೆದ ಮುಖ್ಯಾಧ್ಯಾಪಕಿ: ಕೂಬಿಹಾಳ ಗಂಭೀರ ಕಾಯಿಲೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ಮನಗಂಡ ಮುಖ್ಯಾಧ್ಯಾಪಕಿ ಆರ್.ಎಚ್. ಬಾಗಲಕೋಟ ಅವರು ಸಹಶಿಕ್ಷಕರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಿ ಎಂದು ಜಿಲ್ಲಾಧಿಕಾರಿ ಕಚೇರಿಗೆ ಅಲೆದಿದ್ದಾರೆ.
ಆದರೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಚುನಾವಣಾ ಕರ್ತವ್ಯದಿಂದ ವಿನಾಯಿತಿ ಬಯಸುತ್ತಿರುವ ವ್ಯಕ್ತಿ ನಮ್ಮ ಮುಂದೆ ಹಾಜರಾಗಬೇಕು ಎಂದು ಹೇಳಿದ್ದು ಅಲ್ಲದೇ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಆರ್.ಎಚ್. ಬಾಗಲಕೋಟ ಅವರಿಗೆ ಅವಕಾಶ ನೀಡಿಲ್ಲ.
ಚುನಾವಣಾ ಕರ್ತವ್ಯದಿಂದ ವಿನಾಯಿತಿ ಪಡೆಯುವುದಕ್ಕೆ ಶನಿವಾರ ಲ್ಯಾಮಿಂಗ್ಟನ್ ಸ್ಕೂಲ್ ಆವರಣಕ್ಕೆ ಆಗಮಿಸಿದ್ದ ಉರ್ದು ಶಾಲೆ ಸಹಶಿಕ್ಷಕ ಗದಿಗೆಪ್ಪ ಕೂಬಿಹಾಳ ಅವರು, ಕನ್ನಡಪ್ರಭಕ್ಕೆ ಭೇಟಿಯಾಗುವ ಮೊದಲು ಅನೇಕ ಬಾರಿ ಚುನಾವಣಾ ಅಧಿಕಾರಿಗಳಲ್ಲಿ ಕರ್ತವ್ಯದಿಂದ ವಿನಾಯಿತಿ ನೀಡಿ ಎಂದು ಕೇಳಿಕೊಂಡಿದ್ದಾರೆ. ಅಧಿಕಾರಿಗಳು ಮಾತ್ರ ನಿಮ್ಮ ಬದಲಿ ಬೇರೆ ಯಾರನ್ನಾದರೂ ನೀವೇ ವ್ಯವಸ್ಥೆ ಮಾಡಿ ಎಂದು ಹೇಳಿದ್ದು, ಇದರಿಂದ ದಿಕ್ಕುತೋಚದಂತಾದ ಅವರು, ಅನಾರೋಗ್ಯದ ಸಮಸ್ಯೆ ಜೊತೆಗೆ ಅಂಗವಿಕಲನಾಗಿದ್ದು, ಅಂಗವಿಕಲರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲು ಅವಕಾಶವಿಲ್ಲ. ಆದರೂ ನನ್ನನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅಂಗವಿಕಲನಾಗಿದ್ದರೂ ಈ ಹಿಂದೆ ಸುಮಾರು ನಾಲ್ಕೈದು ಚುನಾವಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಈ ಬಾರಿ ಆರೋಗ್ಯ ಸರಿ ಇಲ್ಲ ವಿನಾಯಿತಿ ನೀಡಿ ಎಂದು ಕೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಅಲವತ್ತುಗೊಂಡಿದ್ದರು.
ಆದರೆ ಮಧ್ಯಾಹ್ನದ ಹೊತ್ತಿಗೆ ನನ್ನ ಅನಾರೋಗ್ಯದ ಸಮಸ್ಯೆ ಆಲಿಸಿದ ಅಸಿಸ್ಟೆಂಟ್ ಕಮಿಷನರ್ ಅವರು ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಿದ್ದಾರೆ ಎಂದು ಕೂಬಿಹಾಳ ಅವರು ದೂರವಾಣಿ ಮುಖಾಂತರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
-ಸತೀಶ ಪಾಗಾದ