ಅಭೂತಪೂರ್ವ ಬೆಂಬಲ ವ್ಯಕ್ತ: ಕುಲಕರ್ಣಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 4
18 ದಿನಗಳಿಂದ ಕ್ಷೇತ್ರದ 194 ಬೂತ್ ಮಟ್ಟದಲ್ಲಿ 53 ಹಳ್ಳಿ ಹಾಗೂ ಶಹರ ಭಾಗದ ಎಂಟು ವಾರ್ಡ್ಗಳಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದು, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯ ತಿಳಿಸಿದ ಅವರು, ಮತಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಬೆಂಬಲಿಸಿ ವಿವಿಧ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ, ಯುವಕರು ಸೇರಿದಂತೆ ಕ್ಷೇತ್ರದ ಮತದಾರರು ಉತ್ಸುಕತೆಯಿಂದ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ. ಈ ಹಿಂದಿನ ಶಾಸಕಿ ಸೀಮಾ ಮಸೂತಿ ಅವರ ದುರಾಡಳಿದಿಂದ ಬೇಸತ್ತಿರುವ ಜನತೆ ಇದೀಗ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಶಾಸಕಿ ಅವರನ್ನು ಪ್ರಚಾರಕ್ಕೆ ಬರದಂತೆ ತಡೆದ ಘಟನೆಗಳೂ ನಡೆದಿವೆ. ಹೆಂಡ, ಹಣದ ಆಮಿಷವೊಡ್ಡ ಮತಯಾಚನೆಗೆ ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಅನಾರೋಗ್ಯದ ನೆಪವೊಡ್ಡಿ ಜನರ ಮತ ಗಿಟ್ಟಿಸಿಕೊಳ್ಳಲು ಆಸ್ಪತ್ರೆ ದಾಖಲಾಗಿದ್ದರು. ಅದರಂತೆ ಜೆಡಿಎಸ್ ಅಭ್ಯರ್ಥಿ ಅಮೃತ ದೇಸಾಯಿ ಮತ ನೀಡಸುವಂತೆ ಮತದಾರರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ವಿನಯ ಕುಲಕರ್ಣಿ ತಿಳಿಸಿದ್ದಾರೆ.
ಇನ್ನು ಕೆಜೆಪಿಯಲ್ಲಿ ಕಾರ್ಯಕರ್ತರಿಲ್ಲದ್ದರಿಂದ ಅಭ್ಯರ್ಥಿ ತವನಪ್ಪ ಅಷ್ಟಗಿ ಅವರು ಮತ ಪ್ರಚಾರಕ್ಕೆ ದಿನಗೂಲಿ ಕಾರ್ಮಿಕ ನೌಕರರನ್ನು ಕರೆದುಕೊಂಡು ಪ್ರಚಾರ ನಡೆಸಿದ್ದಾರೆ. ಕೇವಲ ಸ್ವಾರ್ಥಕ್ಕಾಗಿ ಮತ ಒಡೆಯಲು ಸಂಚು ಹಾಕಿದ್ದಾರೆ. ತವನಪ್ಪ ಅವರ ಪತ್ನಿ ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರಾಗಿದ್ದು, ಹಣ ಗಳಿಕೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಮತದಾರರೂ ನನ್ನ ಕರ್ತವ್ಯ ಹಾಗೂ ಕಾಳಜಿ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ ಸೋತಿದ್ದರೂ ಸಹ ತಾವೂ ಎದೆಗುಂದದೆ ಕ್ಷೇತ್ರದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಸದಾ ನಿಷ್ಠೆಯಿಂದ ದುಡಿಯುತ್ತಿದ್ದೇನೆ. ಪ್ರಚಾರ ಸಂದರ್ಭದಲ್ಲಿ ಜನರ ಬೇಡಿಕೆಗಳನ್ನು ಆಲಿಸಿದ್ದೇನೆ. ಕಷ್ಟ ಸುಖಗಳನ್ನು ಅರಿತಿದ್ದೇನೆ. ನನ್ನ ಕ್ಷೇತ್ರದ ಜನತೆಯ ಬೇಡಿಕೆಗಳಿಗೆ ಸಂಪೂರ್ಣವಾಗಿ ನಿಸ್ವಾರ್ಥದಿಂದ ಸ್ಪಂದಿಸುತ್ತೇನೆ ಎಂದಿದ್ದಾರೆ.
ಮತದಾರರು ಹಾಗೂ ಯುವಕರು ಯಾವುದೇ ಆಮಿಷಕ್ಕೆ ಒಳಗಾಗದೇ, ಭಾನುವಾರ ನಡೆಯಲಿರುವ ಮತದಾನದಲ್ಲಿ ಎಲ್ಲರೂ ಮತಚಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಗೌರವಿಸಬೇಕು ಎಂದು ವಿನಯ ಕುಲಕರ್ಣಿ ಪ್ರಕಟಣೆ ತಿಳಿಸಿದೆ.