ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಹಾವೇರಿ: ತಿಂಗಳಿಂದ ವಿವಿಧ ರಾಜಕೀಯ ಪಕ್ಷಗಳ ಮೇಲಾಟಕ್ಕೆ ಕಾರಣವಾಗಿದ್ದ ವಿಧಾನಸಭೆ ಕ್ಷೇತ್ರಗಳಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ 'ರಾಜಕೀಯ ಭವಿಷ್ಯ'ವನ್ನು ಮತದಾರ ಪ್ರಭು ಭಾನುವಾರ ಮತಪೆಟ್ಟಿಗೆಯಲ್ಲಿ ಕಾಯ್ದಿರಿಸಲಿದ್ದಾನೆ.
ತಮ್ಮ ಅಭ್ಯರ್ಥಿಯೇ ಗೆಲವು ಸಾಧಿಸಬೇಕೆಂಬ ಉಮೇದಿನಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮತದಾರನಿಗೆ ಪುಕ್ಕಟೆ ಮನರಂಜನೆ ನೀಡಿದ್ದು ಸುಳ್ಳಲ್ಲ. ಪ್ರಚಾರದ ಭರಾಟೆಯಲ್ಲಿ ಬಹುತೇಕ ರಾಜಕೀಯ ಪಕ್ಷಗಳ ನಾಯಕರು, ಆಪ್ತ ವಲಯದಲ್ಲಿ ಚರ್ಚಿಸಿದ ವಿಷಯಗಳನ್ನು ಬಹಿರಂಗ ಪ್ರಚಾರ ಕಾರ್ಯದಲ್ಲಿ ಪ್ರಸ್ತಾಪಿಸಿ ತಮ್ಮಷ್ಟಕ್ಕೆ ತಾವೇ ಮುಜುಗರಕ್ಕೆ ಒಳಗಾಗಿರುವ ಉದಾಹರಣೆಗಳು ರಾಜ್ಯಾದ್ಯಂತ ನಡೆದಿರುವುದು ಜಗಜ್ಜಾಹೀರು.
ಹೆಚ್ಚಿದ ಪಕ್ಷಗಳು: ರಾಜ್ಯದಲ್ಲಿ ಈವರೆಗೂ ನಡೆದಿರುವ ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ತೀವ್ರ ಹಣಾಹಣಿ ನಡೆಯುತ್ತಿತ್ತು. ಮತದಾರರು ಸಹ ಸಾಕಷ್ಟು ಅಳೆದು ತೂಗಿ ಮೂರು ಪಕ್ಷಗಳ ಪೈಕಿ ಒಬ್ಬರಿಗೆ ಮಣೆ ಹಾಕುತ್ತಿದ್ದರು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ ಹಾಗೂ ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಅಖಾಡಕ್ಕೆ ಇಳಿದಿದ್ದು, ನಾಡಿನ ಜನತೆಯಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ.
ಯಾರಿಗೆ ಮಣೆ?: ಆಡಳಿತಾರೂಡ ಬಿಜೆಪಿ ಐದು ವರ್ಷದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದು, ಅಧಿಕಾರವಧಿಯಲ್ಲಿ ತಾನು ಕೈಗೊಂಡಿರುವ ಜನಪರ ಯೋಜನೆಗಳನ್ನು ರಾಜ್ಯಾದ್ಯಂತ ಪ್ರಚಾರ ಮಾಡುವ ಮೂಲಕ ಮತದಾರನ ಮನ ಗೆಲ್ಲಲು ಯತ್ನಿಸಿದೆ. ಪ್ರತಿಪಕ್ಷ ಕಾಂಗ್ರೆಸ್, ಬಿಜೆಪಿ ಸರ್ಕಾರ 5 ವರ್ಷದಲ್ಲಿ ನಡೆಸಿದ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತವನ್ನು ಜನರ ಎದುರು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದೆ. ಜೆಡಿಎಸ್, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನತಾ ಜನಾರ್ದನನ ಮುಂದೆ ಹೋಗಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಅವರು, ಈ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಗಳಿಸಿದಲ್ಲಿ ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ.
ಕ್ಷಣಗಣನೆ: ಬಿ.ಎಸ್. ಯಡಿಯೂರಪ್ಪ, ತಾವು ಸಿಎಂ ಆಗಿದ್ದ ಅವಧಿಯಲ್ಲಿ ಕೈಗೊಂಡಿರುವ ಜನೋಪಯೋಗಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಸಿಕ್ಕ ಅತ್ಯಲ್ಪ ಸಮಯದಲ್ಲೇ ರಾಜಕೀಯ ಪಕ್ಷಗಳು ಮತದಾರರನ್ನು ಒಲೈಸಲು ಏನ್ನೆಲ್ಲ ಕಸರತ್ತು ನಡೆಸಿದ್ದಾಗಿದೆ. ರಾಜಕೀಯ ಪಕ್ಷಗಳು ಜಪಿಸಿರುವ ಅಭಿವೃದ್ಧಿ ಮಂತ್ರ, ಪರಸ್ಪರರು ಮಾಡಿಕೊಂಡಿರುವ ಆರೋಪ-ಪ್ರತ್ಯಾರೋಪ, ಆಯ್ಕೆಯಾದಲ್ಲಿ ಜಾರಿಗೆ ತರಲಿರುವ ವಿವಿಧ ಯೋಜನೆಗಳ ಬಗ್ಗೆ ಹೇಗೆ ಸ್ಪಂದಿಸಿದ್ದೇವೆ ಎಂಬುದನ್ನು ಮತದಾನ ಮೂಲಕ ತೋರ್ಪಡಿಸಲು ಜನತೆ ಸಿದ್ಧರಾಗಿದ್ದಾರೆ.
ಆಯೋಗದ ಕಟ್ಟೆಚ್ಚರ: ಚುನಾವಣಾ ಆಯೋಗದ ಕಟ್ಟೆಚ್ಚರದ ಕ್ರಮಗಳು ಈ ಬಾರಿ ಚುನಾವಣೆಯಲ್ಲಿ ಅಕ್ರಮ ಎಸೆಗಬೇಕೆಂಬ ಖಯಾಲಿ ಹೊಂದಿದ್ದ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಶಾಕ್ ಕೊಟ್ಟಿವೆ. ಆದಾಗ್ಯೂ, ರಾಜ್ಯದ ವಿವಿಧ ಭಾಗಗಳಲ್ಲಿ ರಾಜಕೀಯ ಪಕ್ಷಗಳು ಹಣ, ಹೆಂಡ, ಸೀರೆ, ಚಿನ್ನಾಭರಣ ಮತ್ತಿತರ ಆಮಿಷಗಳನ್ನೊಡ್ಡಿ ಮತದಾರರನ್ನು ಖರೀದಿಸಲು ಯತ್ನಿಸಿದ್ದುಂಟು. ಮತದಾರ ಆಮಿಷಗಳಿಗೆ ಒಳಗಾಗಿದ್ದಾನೋ? ಆಮಿಷವೊಡ್ಡಲು ಯತ್ನಿಸಿದ ಪಕ್ಷಗಳಿಗೆ ತಕ್ಕಪಾಠ ಕಲಿಸಿದ್ದಾನೋ ಎಂಬುದು ಮೇ 8ರಂದು ತಿಳಿಯುತ್ತದೆ.
- ಬಿ.ಕೆ. ಮಹೇಂದ್ರ