ಚಿಣ್ಣರ ಮೇಳದ ಮಕ್ಕಳ ಸಂತೆ
ಧಾರವಾಡ: ಇಲ್ಲಿನ ರಂಗಾಯಣದಲ್ಲಿ ನಡೆದ ಚಿಣ್ಣರ ಮೇಳ ಬೇಸಿಗೆ ಶಿಬಿರದ ಮಕ್ಕಳಿಂದ ಶನಿವಾರ ರಂಗಾಯಣ ಆವರಣದಲ್ಲಿ ಮಕ್ಕಳ ಸಂತೆ ನಡೆಯಿತು.
ರಂಗಾಯಣ ನಿರ್ದೇಶಕ ಸುಭಾಸ ನರೇಂದ್ರ ಮಾತನಾಡಿ, ಮಕ್ಕಳಲ್ಲಿ ವ್ಯವಹಾರದ ಜ್ಞಾನ ಮೂಡಿಸುವ ನಿಟ್ಟಿನಲ್ಲಿ ಶಿಬಿರದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಸಹಾಯಕವಾಗಿವೆ. ಈ ರೀತಿಯ ವ್ಯವಾಹಾರಿಕ ಜ್ಞಾನದಿಂದ ಬರುವ ದಿನಗಳಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಮಕ್ಕಳಿಗೆ ಪರಿಪೂರ್ಣ ತರಬೇತಿ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾರಾಟಕ್ಕಿಟ್ಟ ವಸ್ತುಗಳನ್ನು ಖರೀದಿ ಮಾಡುವುದರ ಮೂಲಕ ಮಕ್ಕಳ ಸಂತೆಗೆ ಚಾಲನೆ ನೀಡಿದರು. ಮಕ್ಕಳು ಸಂತೆಯಲ್ಲಿ ಹಣ್ಣುಗಳು, ದವಸ-ಧಾನ್ಯಗಳು, ತರಕಾರಿಗಳು, ತಿಂಡಿ-ತಿನಿಸುಗಳು, ತಂಪು ಪಾನೀಯಗಳು, ಪುಸ್ತಕಗಳು, ಚಿತ್ರಕಲೆ, ಮಣ್ಣಿನಿಂದ ತಯಾರಿಸಿದ ವಸ್ತುಗಳ ಮಾರಾಟ ಜೋರಾಗಿತ್ತು. ಮಕ್ಕಳ ಪಾಲಕರು ಮತ್ತು ಶಿಬಿರದ ನಿರ್ದೇಶಕರೂ ಈ ಸಂತೆಯಲ್ಲಿ ಭಾಗವಹಿಸಿದ್ದರು. ಶಿಬಿರದ ನಿರ್ದೇಶಕ ಕೆ. ಜಗುಚಂದ್ರ, ರಂಗಾಯಣ ಆಡಳಿತಾಧಿಕಾರಿ ಕೆ.ಎಚ್. ಚನ್ನೂರ ಇದ್ದರು.