ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಾಗಲಕೋಟೆ ಮತ ಎಣಿಕೆ ಕೇಂದ್ರ ಎದುರು ವಾಮಾಚಾರ

Vishwanath S
Updated On : 5 May 2013, 11:46 am

ಬಾಗಲಕೋಟೆ:  ಇದೇ 8ರಂದು ಅಭ್ಯರ್ಥಿಗಳ ಹಣೆ ಬರಹ ಪ್ರಕಟಿಸಲಿರುವ ಇಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಯಾರೋ ಶುಕ್ರವಾರ ರಾತ್ರಿ ವಾಮಾಚಾರ ಮಾಡಿಸಿರುವುದು ಬೆಳಕಿಗೆ ಬಂದಿದೆ.
ವಿದ್ಯಾಗಿರಿಯಲ್ಲಿ ಇರುವ ಬಸವೇಶ್ವರ ಎಂಜಿನಿಯರಿಂಗ್  ಕಾಲೇಜನ್ನು ಚುನಾವಣಾ ಆಯೋಗ ಜಿಲ್ಲೆಯ ಏಳೂ ಕ್ಷೇತ್ರಗಳ ಮತ ಎಣಿಕೆಯ ಕೇಂದ್ರವಾಗಿ ರೂಪಿಸಿದೆ. ಮೇ 5 ರಂದು ಸಂಜೆಯ ವೇಳೆಗೆ ಏಳೂ ಕ್ಷೇತ್ರದ ಮತ ಪೆಟ್ಟಿಗೆಗಳು ಇಲ್ಲಿಗೆ ಬರಲಿವೆ. ಮೇ 8 ರಂದು ಏಳು ಪ್ರತ್ಯೇಕ ಕೋಣೆಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಇಂಥ ಮಹತ್ವದ ಕೇಂದ್ರದ ಮುಖ್ಯದ್ವಾರಕ್ಕೆ ವಾಮಾಚಾರ ಮಾಡಿಸಲಾಗಿದೆ.
ಬೃಹತ್ ಗೇಟಿನ ಅಡಿಯಲ್ಲಿ ಕುಂಬಳಕಾಯಿ, ಬಾಳೆಹಣ್ಣು, ಲಿಂಬೆ ಹಣ್ಣು, ಮೊಟ್ಟೆ, ಬೇವಿನ ಸೊಪ್ಪನ್ನು ಕುಂಕುಮದಲ್ಲಿ ಅದ್ದಿ ಬಟ್ಟೆಯಲ್ಲಿ ಗಂಟು ಕಟ್ಟಿ ಇಡಲಾಗಿದೆ. ಅವಸರದಲ್ಲಿ ಆ ಗಂಟನ್ನು ಎಸೆದು ಹೋಗಿದ್ದರಿಂದ ಅದರಲ್ಲಿನ ಸಾಮಗ್ರಿಗಳೆಲ್ಲಾ ಚದುರಿ ಬಿದ್ದಿದ್ದವು. ಈ ಸುದ್ದಿ ವಿದ್ಯಾಗಿರಿ ಪ್ರದೇಶದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಇದನ್ನು ನೋಡಲು ನೂಕು ನುಗ್ಗಲು ಉಂಟಾಗಿತ್ತು. ಜನತೆಯನ್ನು ನಿಯಂತ್ರಿಸಲು ಬಂದಿದ್ದ ಪೊಲೀಸರು ಆ ಎಲ್ಲ ವಸ್ತುಗಳನ್ನು ಬೇರೆಡೆ ಸಾಗಿಸಿ ಪರಿಸ್ಥಿತಿ ನಿಯಂತ್ರಿಸಿದರು. ಈ ಕೇಂದ್ರದಿಂದ ಹೊರಡುವ ಫಲಿತಾಂಶ ಏಳೂ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಅನ್ವಯ ಆಗುವುದರಿಂದ ಇದಕ್ಕೆ ಇವರೇ ಕಾರಣ ಎಂದು ಹೇಳುವುದು ಅಸಾಧ್ಯ. ಆದಾಗ್ಯೂ ಕಣದಲ್ಲಿರುವ ಯಾರನ್ನೇ ಮಾತನಾಡಿಸಿದರೂ ಅವರು ಬೆರಳು ತೋರಿಸುವುದು ತಮ್ಮ ಸಮೀಪದ ಎದುರಾಳಿಯತ್ತ. ಹಾಗಾಗಿ ಈ ವಾಮಾಚಾರದ ಪ್ರಕರಣವೂ ಆರೋಪ-ಪ್ರತ್ಯಾರೋಪಗಳಿಗೆ ಗ್ರಾಸವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement