ಸಂಜೆ ವೇಳೆ ಚುರುಕಾದ ಮತದಾನ
ಕುಂದಗೋಳ: ತಾಲೂಕಿನಲ್ಲಿ ಮುಂಜಾನೆ 7ರಿಂದ ಪ್ರಾರಂಭವಾದ ಮತದಾನ ಮಧ್ಯಾಹ್ನದ ಬಿಸಿಲಿಗೆ ಮಂದಗತಿಯಲ್ಲಿ ಸಾಗಿತು. ಸಂಜೆ ಹೊತ್ತಿಗೆ ಚುರುಕಾಯಿತು. ಎಲ್ಲ ಪಕ್ಷಗಳ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಮತದಾರರ ಮನವೊಲಿಸುವ ಕೊನೆ ಗಳಿಗೆಯ ಪ್ರಯತ್ನದಲ್ಲಿ ತೊಡಗಿದ್ದರು. ಮತಪಟ್ಟಿಯಲ್ಲಿ ಅನೇಕ ಲೋಪದೋಷಗಳು ಕಂಡುಬಂದಿದ್ದು, ವಾರ್ಡ್‌ನಿಂದ ಬೇರೆ ಕಡೆಗೆ ಹೆಸರು ಸ್ಥಳಾಂತರಗೊಂಡ ನೂರಾರು ಮತದಾರರು ಅಲೆದಾಡಿ ಬೇಸತ್ತು ಮತ ಚಲಾಯಿಸದೆ ಮನೆಗೆ ತೆರಳಿದರು. ಚುನಾವಣಾ ಗುರುತಿನ ಚೀಟಿ ಇದ್ದರೂ ಅನೇಕ ಹೆಸರುಗಳು ಮತಪಟ್ಟಿಯಿಂದ ನಾಪತ್ತೆಯಾಗಿ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.