ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಭ್ಯರ್ಥಿಗಳೂ ನಿರಾಳ ಮತದಾರನಿಗೂ ನೆಮ್ಮದಿ

Lingaraj Badiger
Updated On : 7 May 2013, 11:14 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 6
ವಿಧಾನಸಭೆ ಚುನಾವಣೆಯ ನಿರ್ಣಾಯಕ ಘಟ್ಟ ಮತದಾನ ಮುಗಿಯುತ್ತಿದ್ದಂತಯೇ ಉ-ಕದ ಇಬ್ಬರು ಬಿಜೆಪಿ ನಾಯಕರ ರಾಜಕೀಯ ತಂತ್ರಗಾರಿಕೆ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ. ಮುಖ್ಯಮಂತ್ರಿ ಅಭ್ಯರ್ಥಿ ಜಗದೀಶ ಶೆಟ್ಟರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಭಾನುವಾರ ರಾತ್ರಿ ಹುಬ್ಬಳ್ಳಿ ಬಿಟ್ಟು ಬೆಂಗಳೂರು ಸೇರಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಇಡೀ ರಾಜ್ಯ ಸುತ್ತಿ ಮತದಾನಕ್ಕೆ ಮೂರೇ ದಿನಗಳು ಬಾಕಿ ಇವೆ ಎನ್ನುತ್ತಿರುವಂತೆಯೇ ಹುಬ್ಬಳ್ಳಿಯಲ್ಲಿ ಠಿಕಾಣಿ ಹೂಡಿದ ಸಿಎಂ ಶೆಟ್ಟರ್ ಅವರು ತಮ್ಮ ಗೆಲವು ಖಚಿತವಾಗಿದ್ದರೂ ಆ ಮೂರು ದಿನಗಳಲ್ಲಿ ಇಡೀ ಕ್ಷೇತ್ರಾದ್ಯಂತ ಸುತ್ತಿ ಬಸವಳಿದಿದ್ದಾರೆ. ಇವರ ಜೊತೆಗೆ  ಹು-ಧಾ ಸೆಂಟ್ರಲ್ ಕ್ಷೇತ್ರವನ್ನು ಪಾದಯಾತ್ರೆ ಮಾಡುತ್ತಲೇ ಪರಿಚಯ ಮಾಡಿಕೊಂಡಿದ್ದ ಸಿಎಂ ಶೆಟ್ಟರ್ ಪತ್ನಿ ಶಿಲ್ಪಾ ಎಂದಿನಂತೆ ಮನೆ ಕೆಲಸದಲ್ಲಿ ತೊಡಗಿದ್ದಾರೆ.
ಸ್ಟಾರ್ ಕ್ಯಾಂಪೇನರ್ ಶಿಲ್ಪಾ:  ಕಳೆದ ಇಪ್ಪತ್ತಕ್ಕೂ ಹೆಚ್ಚು ದಿನಗಳಿಂದ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರನ್ನು ಮತ್ತು ಮಹಿಳಾ ಕಾರ್ಯಕರ್ತರನ್ನು ಕಟ್ಟಿಕೊಂಡು ಓಡಾಡಿದ್ದ ಶಿಲ್ಪಾ ಅವರಿಗೆ ಚುನಾವಣಾ ಮೊದಲ ಅನುಭವ ಕೂಡ ಹೌದು. ಶೆಟ್ಟರ್ ಬಿಜೆಪಿಯ ಪಾಲಿಗೆ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಿದ್ದಂತೆಯೇ ಮೈಕೊಡವಿ ಎದ್ದು ನಿಂತ ಶಿಲ್ಪಾ ಶೆಟ್ಟರ್ ಅವರಂತೂ ಸೆಂಟ್ರಲ್ ಕ್ಷೇತ್ರದ ಮಟ್ಟಿಗೆ ಸ್ಟಾರ್ ಕ್ಯಾಂಪೇನರ್ ಆಗಿದ್ದರು. ಶೆಟ್ಟರ್ ಅವರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಪಣತೊಟ್ಟು ನಿಂತಿದ್ದ ಶಿಲ್ಪಾ ಅವರು ಹುಬ್ಬಳ್ಳಿಯ ಖಡಕ್ ಬಿಸಿಲಿಗೆ ಸವಾಲು ಹಾಕಿದಂತೆ ಮನೆ ಮನೆಗೆ ತೆರಳಿ ಉತ್ತರ ಕರ್ನಾಟಕದವರೊಬ್ಬರಿಗೆ ಅದರಲ್ಲೂ ಹುಬ್ಬಳ್ಳಿ ಹುಡುಗನಿಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ ಎಂದು ಪ್ರಚಾರ ಮಾಡಿದ್ದರು. ಈಗ ಆ ಎಲ್ಲದಕ್ಕೂ ಬ್ರೇಕ್ ಬಿದ್ದಾಗಿದೆ. ರಾಜ್ಯ ರಾಜಕೀಯದ ಸೂತ್ರ ತಮ್ಮ ಕೈಯಲ್ಲಿರಬೇಕು ಮತ್ತು ಅದನ್ನು ಹೇಗೆ ಕೈವಶ ಮಾಡಿಕೊಳ್ಳಬೇಕು ಎಂದು ಚಿಂತಿಸುತ್ತಿರುವ ಸಂಸದ ಪ್ರಹ್ಲಾದ ಜೋಶಿ ಮತ್ತು ಸಿಎಂ ಶೆಟ್ಟರ್  ರಾಜ್ಯ ಮತ್ತು ರಾಷ್ಟ್ರಮಟ್ಟದ ಬಿಜೆಪಿ ನಾಯಕರೊಂದಿಗೆ ಮೇ 8ರಂದು ಪ್ರಕಟವಾಗುವ ಫಲಿತಾಂಶ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಕಾರ್ಯತಂತ್ರ ಹೆಣೆಯುವಲ್ಲಿ ಮಗ್ನರಾಗಿದ್ದಾರೆ.
ಮತದಾರನ ಮೂಡ್ ಏನು:  ಈ ಬಾರಿ ಮತದಾನ ದಿನ ಭಾನುವಾರ ನಿಗದಿಯಾಗಿದ್ದರಿಂದ ಒಂದಿನ ರಜಾ ಹೋಯಿತು ಎಂದು ನಗರ ಪ್ರದೇಶದ ಮತದಾರ ಪರಿತಪಿಸಿ ತನ್ನ ನಿತ್ಯ ಕಾಯಕಕ್ಕೆ ಮರಳಿದ್ದಾನೆ. ಗ್ರಾಮೀಣ ಭಾಗದಲ್ಲಿ  ಚುನಾವಣೆ ಬರಲಿ ಹೋಗಲಿ ನನ್ನ ಕಾಯಕ ತಪ್ಪಿದ್ದಲ್ಲ ಎಂದುಕೊಂಡು ಮತದಾನದ ದಿನವೇ ಕಾಯಕ ಮುಂದುವರಿಸಿದ್ದಾನೆ. ಒಟ್ಟಾರೆ ಚುನಾವಣೆಯ ಒಂದು ಹಂತದ ಆರ್ಭಟ ಈಗ ಮುಗಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement