ಚುನಾವಣಾ ಫಲಿತಾಂಶಕ್ಕೀಗ ಕ್ಷಣಗಣನೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 7
ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಬಾಕಿ ಉಳಿದಿರುವುದು ಕ್ಷಣಗಣನೆಯಷ್ಟೇ.
ಕಳೆದ ಒಂದು ತಿಂಗಳಿನಿಂದ ಬಿಸಿಲ ಬೇಗೆ ಲೆಕ್ಕಿಸದೇ ಪ್ರಚಾರಕ್ಕಾಗಿ ಗಲ್ಲಿ ಗಲ್ಲಿ ತಿರುಗಾಡಿದ್ದರ ಪ್ರತಿಫಲ ಕೆಲವೇ ಕ್ಷಣಗಳಲ್ಲಿ ಹೊರಬೀಳಲಿದೆ. ತಲೆ ತಲಾಂತರದಿಂದ ರಾಜಕೀಯ ಕ್ಷೇತ್ರದಲ್ಲಿರುವವರು, ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವವರು, ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದವರು ಈ ಕ್ಷಣಗಣನೆಗಾಗಿ ಕಾಯುತ್ತಿದ್ದಾರೆ.
ತಮ್ಮ ಗೆಲುವಿಗಿಂತ ಎದುರಾಳಿ ಸೋಲಬೇಕೆಂಬ ಉದ್ದೇಶದಿಂದ ಚುನಾವಣಾ ಕಣಕ್ಕಿಳಿದವರು ತಮಗೆಷ್ಟು ಮತಗಳು ಲಭಿಸಿರಬಹುದೆಂಬ ಲೆಕ್ಕಾಚಾರಕ್ಕಿಂತ ಎದುರಾಳಿಯ ಸೋಲು-ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಗೆಲ್ಲುವ ಸಾಧ್ಯಾಸಾಧ್ಯತೆಗಳು ಹೆಚ್ಚಿರುವ ಅಭ್ಯರ್ಥಿಗಳು ಹಾಗೂ ಅವರ ಹಿಂಬಾಲಕರು ಈಗಾಗಲೇ ಬಣ್ಣ, ಗುಲಾಲು, ಹೂವಿನ ಹಾರ ಮತ್ತಿತರ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡು, ವಿಜಯೋತ್ಸವದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬೆಳಗ್ಗೆ 8ಕ್ಕೆ ಮತ ಎಣಿಕೆ ಪ್ರಾರಂಭಗೊಳ್ಳುವುದರಿಂದ ಅಭ್ಯರ್ಥಿಗಳು ತಮ್ಮ ನೂರಾರು ಬೆಂಬಲಿಗರಿಗೆ ಮತ ಎಣಿಕೆ ಕೇಂದ್ರ ಸಮೀಪ ಆಗಮಿಸುವಂತೆ ಈಗಾಗಲೇ ಸೂಚನೆ ನೀಡಿದ್ದಾರೆ. ಗೆಲ್ಲುವ ಸಾಧ್ಯತೆ ಹೆಚ್ಚಿರುವ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಬಳಿ ಒಂದು ಸುತ್ತು ವಿಜಯೋತ್ಸವ ಆಚರಿಸಿ, ನಂತರ ತಾವು ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಮೆರವಣಿಗೆ ನಡೆಸಲು ಸಿದ್ಧತೆ ಕೈಗೊಂಡಿದ್ದಾರೆ.
ಕೆಲ ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಇಬ್ಬರಲ್ಲಿ ಯಾವುದೇ ಒಬ್ಬ ಅಭ್ಯರ್ಥಿಯ ಫಲಿತಾಂಶ ಕೂದಲೆಳೆ ಅಂತರದಲ್ಲಿ ಏರುಪೇರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಂತಹ ಅಭ್ಯರ್ಥಿಗಳಿಬ್ಬರೂ ಗೆಲುವು ತಮ್ಮದೇ ಎಂಬ ನಿರೀಕ್ಷೆಯಿಂತ ವಿಜಯೋತ್ಸವದ ಸಿದ್ಧತೆ ನಡೆಸಿದ್ದಾರೆ. ಆದರೆ, ಇವರಲ್ಲಿ ವಿಜಯೋತ್ಸವ ಆಚರಿಸುವ ಅಭ್ಯರ್ಥಿ ಯಾರೆಂಬ ಗುಟ್ಟು ಇನ್ನೂ ಕೆಲವೇ ಸಮಯದಲ್ಲಿ ಬಹಿರಂಗಗೊಳ್ಳಲಿದೆ.
ಕೆಲ ಅಭ್ಯರ್ಥಿಗಳ ಹಿಂಬಾಲಕರಂತೂ ಪಟಾಕಿ, ಗುಲಾಲು ಮತ್ತಿತರ ಸಾಮಗ್ರಿ ಖರೀದಿಸುವಾಗಲೇ ವ್ಯಾಪಾರಸ್ಥರಲ್ಲಿ ತಾವು ಖರೀದಿಸಿರುವ ಸಾಮಗ್ರಿಗಳನ್ನು ವಾಪಸ್ಸು ತಂದುಕೊಡುವ ಸಾಧ್ಯತೆಗಳ ಬಗ್ಗೆ ಖರಾರು ಮಾಡಿದ್ದಾರೆ. ತಮ್ಮ ಅಭ್ಯರ್ಥಿ ಗೆದ್ದರೆ ಖರೀದಿಸಿದ ಸಾಮಗ್ರಿ ವಿಜಯೋತ್ಸವಕ್ಕೆ ಬಳಸುವುದು ಇಲ್ಲದೇ ಇದ್ದಲ್ಲಿ ಖರೀದಿಸಿದ ಸಾಮಗ್ರಿಯನ್ನು ವಾಪಸ್ಸು ವ್ಯಾಪಾರಸ್ಥರಿಗೇ ಮರಳಿಸುವ ಬಗ್ಗೆ ಹಿಂಬಾಲಕರು ಮಾತುಕತೆಯನ್ನೂ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಲ್ಲಂತೂ ಹೆಚ್ಚಿನವರು ಮತ ಎಣಿಕೆ ಸಂದರ್ಭದಲ್ಲಿ ತಮಗೆ ಲಭಿಸುವ ಮತಗಳ ಆಧಾರದ ಮೇಲೆ ಮುಂದಿನ ವಿಜಯೋತ್ಸವದ ತಯಾರಿ ನಡೆಸಲು ನಿರ್ಧರಿಸಿದ್ದಾರೆ. ಕೆಲ ಅಭ್ಯರ್ಥಿಗಳಂತೂ ತಮ್ಮ ಗೆಲುವು ನಿಶ್ಚಿತವೆಂಬ ನಿರೀಕ್ಷೆಯಿಂದ ಮತದಾನ ಪೂರ್ಣಗೊಂಡ ದಿನವೇ ಬೆಂಬಲಿಗರೊಂದಿಗೆ ಸೇರಿ ಔತಣಕೂಟವನ್ನೂ ಏರ್ಪಡಿಸಿದ್ದರು.
ಒಟ್ಟಿನಲ್ಲಿ ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಈ ಅಂತಿಮ ಘಳಿಗೆ ಪ್ರತಿಯೊಬ್ಬ ಅಭ್ಯರ್ಥಿ ಹಾಗೂ ಬೆಂಬಲಿಗರಲ್ಲಿ ಆತಂಕ ಹಾಗೂ ಒತ್ತಡದ ವಾತಾವರಣ ನಿರ್ಮಾಣ ಮಾಡಿದೆ. ಇನ್ನೂ ಕ್ಷೇತ್ರದ ಜನತೆ ಹಾಗೂ ರಾಜಕೀಯದ ಬಗ್ಗೆ ಆಸಕ್ತಿ ಇರುವವರಲ್ಲಿ ಕುತೂಹಲ ಮೂಡಿಸಿದೆ.
ವಿದ್ಯುನ್ಮಾನ ಮತ ಯಂತ್ರಗಳ ಮೂಲಕ ಮತದಾನ ನಡೆದಿದ್ದರಿಂದ ಮತ ಎಣಿಕೆ ಬೇಗ ಪೂರ್ಣಗೊಳ್ಳಲಿದ್ದು, ಮಧ್ಯಾಹ್ನ ಸುಮಾರು 3-4ರೊಳಗೆ ಎಲ್ಲ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ. ಜೊತೆಗೆ ಸಂಜೆ ಹೊತ್ತಿಗೆ ರಾಜ್ಯದ ನೂತನ ಸರ್ಕಾರದ ಬಗ್ಗೆಯೂ ಖಚಿತ ಮಾಹಿತಿ ದೊರೆಯಲಿದೆ. ನೂತನ ಶಾಸಕರು ಕ್ಷೇತ್ರದಲ್ಲಿ ಭವಿಷ್ಯದ ದಿನಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಒಂದಿಷ್ಟು ನಿರೀಕ್ಷೆ ಮೂಡಲಿದೆ.