ಪಿಯುಸಿ: ಹರ್ಷ, ನಾಗಭೂಷಣ, ವಿನೂತಾ ಜಿಲ್ಲೆಗೆ ಪ್ರಥಮ
ಧಾರವಾಡ: ಪಿಯುಸಿ ಪರೀಕ್ಷೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ನಲವಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಹರ್ಷಗೌಡ ಪಾಟೀಲ 553 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಹುಬ್ಬಳ್ಳಿಯ ನಳಂದ ಪದವಿಪೂರ್ವ ವಿಜ್ಞಾನ ಕಾಲೇಜಿನ ನಾಗಭೂಷಣ ಬದ್ದಿ 583 ಅಂಕ ಪಡೆದು ವಿಜ್ಞಾನ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಹಾಗೆಯೇ, ಹುಬ್ಬಳ್ಳಿಯ ಜೆ.ಜಿ. ಪಿಯು ವಾಣಿಜ್ಯ ಕಾಲೇಜಿನ ವಿನೂತಾ ದಂಗೆ 571 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿಯಲ್ಲಿ ಧಾರವಾಡ ಶೇ. 66.26ರಷ್ಟು ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾನಿಕೇತನ ಪದವಿಪೂರ್ವ ಕಾಲೇಜು ಶೇ. 99.74ರಷ್ಟು ಸಾಧನೆ ಮಾಡಿದೆ. ವಾಣಿಜ್ಯ ವಿಭಾಗದಲ್ಲಿ ಧಾರವಾಡದ ಆರ್ಎಲ್ಎಸ್ ಕಾಲೇಜು ಶೇ. 99.23ರಷ್ಟು ಹಾಗೂ ಕಲಾ ವಿಭಾಗದಲ್ಲಿ ಆರ್ಎಲ್ಎಸ್ ಪಿಯು ಕಾಲೇಜು ಶೇ. 91.0ರಷ್ಟು ಸಾಧನೆ ಮಾಡಿ ಪ್ರಥಮ ಸ್ಥಾನ ಗಳಿಸಿದೆ.