ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮತ ಬೇಟೆಯಲ್ಲಿ ಗೆಲುವು ಯಾರದ್ದು?

Vishwanath S
Updated On : 8 May 2013, 3:44 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 7
ರಾಜ್ಯ ವಿಧಾನಸಭೆ ಚುನಾವಣೆಯ ಅಂತಿಮ ಘಟ್ಟ ಬಂದೇ ಬಿಟ್ಟಿದೆ. ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಭವಿಷ್ಯ ಇಂದು ಬಹಿರಂಗಗೊಳ್ಳಲಿದೆ. ತನ್ಮೂಲಕ ಒಂದು ತಿಂಗಳ ಕಾಲ ನಡೆದ ರಾಜಕೀಯ ಸಂಘರ್ಷ ಅಂತ್ಯಗೊಳ್ಳಲಿದೆ.
ಯಾವ ಪಕ್ಷದ ಅಭ್ಯರ್ಥಿಗಳು ಗೆಲ್ಲಬಹುದು, ಯಾರು ಸೋಲುಣ್ಣಬಹುದು ಎಂಬೆಲ್ಲಾ ಮಾಹಿತಿ ಮಧ್ಯಾಹ್ನದ ಹೊತ್ತಿಗಾಗಲೇ ತಿಳಿದು ಬರಲಿದೆ. ಇನ್ನು ಯಾವ ಯಾವ ಜಿಲ್ಲೆಯಲ್ಲಿ ಅಂತಿಮ ಹಂತಕ್ಕೆ ಜಿಲ್ಲಾಡಳಿತ ಏನೆಲ್ಲಾ ಸಿದ್ಧತೆ ಮಾಡಿಕೊಂಡಿದೆ. ಏನೆಲ್ಲಾ ರಾಜಕೀಯ ಲೆಕ್ಕಾಚಾರಗಳು ನಡೆದಿವೆ ಎಂಬುದರ ಮಾಹಿತಿ ಇಲ್ಲಿದೆ.
ಧಾರವಾಡ:  ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೃಷಿ ವಿವಿ ಮುಖ್ಯ ಕಟ್ಟಡದಲ್ಲಿ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಬಿಜೆಪಿ ಆರರಲ್ಲಿ ಗೆಲವು ಸಾಧಿಸಿದ್ದರೆ, ಕಲಘಟಗಿಯಲ್ಲಿ ಕಾಂಗ್ರೆಸ್ ಮೇಲುಗೈ ಪಡೆದಿತ್ತು. ಏಳು ಕ್ಷೇತ್ರಗಳ ಮತ ಎಣಿಕೆಗೆ ಏಳು ಕೊಠಡಿಗಳನ್ನು ನಿಗದಿಪಡಿಸಲಾಗಿದ್ದು, ಪ್ರತಿ ಕೊಠಡಿಯಲ್ಲಿ 18 ಮತ ಎಣಿಕಾ ಮೇಲ್ವಿಚಾರಕರು, 15 ಜನ ಮತ ಎಣಿಕಾ ಸಹಾಯಕರು ಹಾಗೂ 16 ಜನ ಮೈಕ್ರೋ ಆಬ್ಸರವರ್‌ಗಳು ಸೇರಿದಂತೆ ಒಟ್ಟು 343 ಜನರನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗಿದೆ.
ಬಿಜಾಪುರ:  ಜಿಲ್ಲೆಯ 8 ವಿಧಾನಸಭೆ ಮತಕ್ಷೇತ್ರಗಳ 115 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.  ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಫಲಿತಾಂಶ ಹತ್ತಿರ ಬರುತ್ತಿರುವುದರಿಂದ ತಳಮಳ ಹೆಚ್ಚಾಗಿದೆ.   ಅಭ್ಯರ್ಥಿಗಳ ಕುಟುಂಬ ಸದಸ್ಯರು ದೇವರ ಮ್ಯಾಲೆ ಭಾರಾ ಹಾಕ್ರಿ.., ಎಲ್ಲಾ ಸರಿ ಹೋಗ್ತದ ಎಂಬ ಸಾಂತ್ವನದ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಆದದ್ದಾಗಲಿ ಗೋವಿಂದನ ದಯೆಯೊಂದು ಇರಲಿ ಎಂದು ದಾಸರ ಪದವನ್ನು ನೆನಪಿಸಿಕೊಂಡು ಅಭ್ಯರ್ಥಿಗಳು ಜೀವ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.
ಬಾಗಲಕೋಟೆ:  ಗೆಲವಿಗಾಗಿ ಹೋರಾಟ ಮಾಡುತ್ತ ಬಂದಿರುವ ಜಿಲ್ಲೆಯ ಏಳೂ ಕ್ಷೇತ್ರಗಳ 60 ಮಂದಿ ಹುರಿಯಾಳುಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಾಧ್ಯಮಗಳ ಸಮೀಕ್ಷೆ, ಗುಪ್ತದಳದ ಮಾಹಿತಿ, ಬೆಂಬಲಿಗರು ನೀಡುವ ಗೆಲವಿಗೆ ಪೂರಕವೆನಿಸುವ ಅಂಶಗಳನ್ನು ತಾಳೆ ಹಾಕುತ್ತಲೇ ನಾಳಿನ ಭವಿಷ್ಯಕ್ಕೆ ಎದುರು ನೋಡುತ್ತಿರುವ ಅಭ್ಯರ್ಥಿಗಳು ಒಳಗೊಳಗೇ ತಮ್ಮಷ್ಟಕ್ಕೆ ತಾವೇ ಧೈರ್ಯ ಹೇಳಿಕೊಳ್ಳುತ್ತ, ಆತ್ಮವಿಶ್ವಾಸ ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ಇದೇನೇ ಇದ್ದರೂ ಗೆಲ್ಲುವುದು ಏಳು ಜನ ಮಾತ್ರ ಎನ್ನುವುದು ವಾಸ್ತವ.
ಬಾಗಲಕೋಟೆಯ ವಿದ್ಯಾಗಿರಿ ಪ್ರದೇಶದಲ್ಲಿ ಇರುವ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಏಳೂ ಕ್ಷೇತ್ರಗಳಿಗೆ ಪ್ರತ್ಯೇಕ ಎಣಿಕಾ ಕೋಣೆಗಳನ್ನು ನಿರ್ಮಿಸಲಾಗಿದೆ.
ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬುಧವಾರ ನಡೆಯಲಿದ್ದು, ಜಿಲ್ಲಾಡಳಿತ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ನಗರದ ಟಿಳಕವಾಡಿಯ ಆರ್‌ಪಿಡಿ ಮಹಾವಿದ್ಯಾಲಯದ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ನಿಪ್ಪಾಣಿ, ಚಿಕ್ಕೋಡಿ-ಸದಲಗಾ, ಅಥಣಿ, ಕಾಗವಾಡ ಕ್ಷೇತ್ರ, ಕುಡಚಿ(ಎಸ್ಸಿ) ಕ್ಷೇತ್ರ, ರಾಯಬಾಗ (ಎಸ್ಸಿ) ಕ್ಷೇತ್ರ, ಹುಕ್ಕೇರಿ, ಅರಬಾವಿ ಕ್ಷೇತ್ರ, ಗೋಕಾಕ, ಯಮಕನಮರಡಿ(ಎಸ್ಟಿ) ಕ್ಷೇತ್ರ, ಬೆಳಗಾವಿ ಉತ್ತರ ಕ್ಷೇತ್ರ, ಬೆಳಗಾವಿ ದಕ್ಷಿಣ ಕ್ಷೇತ್ರ, ಬೆಳಗಾವಿ ಗ್ರಾಮೀಣ ಕ್ಷೇತ್ರ,   ಖಾನಾಪುರ, ಕಿತ್ತೂರ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ಕ್ಷೇತ್ರ, ರಾಮದುರ್ಗ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಗುರುತಿನ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ.
ಗದಗ: ಮತ ಎಣಿಕೆ ಕಾರ್ಯವನ್ನು ಸುಲಲಿತವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಪೂರ್ಣಗೊಳಿಸಿದ್ದು, ಮತ ಎಣಿಕೆ ನಡೆವ ತೋಂಟದಾರ್ಯ ಎಂಜನಿಯರಿಂಗ್ ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.  ಕಳೆದ ಬಾರಿಗಿಂತ ಈ ಬಾರಿ ಮತದಾನ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಫಲಿತಾಂಶದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳನ್ನು ಮತದಾರರು, ಅಭ್ಯರ್ಥಿಗಳು ಮತ್ತು ಎಲ್ಲ ಪಕ್ಷಗಳು ನಿರೀಕ್ಷಿಸುತ್ತಿವೆ. ಶೇಕಡಾವಾರು ಮತದಾನದ ಆಧಾರದಲ್ಲಿಯೇ ಯಾವ ಪಕ್ಷಗಳು ಗೆಲ್ಲುತ್ತವೆ ಎನ್ನುವ ಲೆಕ್ಕಾಚಾರಕ್ಕೆ ಇಂದು ಅಂತಿಮ ರೂಪ ದೊರೆಯಲಿದೆ. ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳ ಪೈಕಿ ಯಾರ್ಯಾರು ಗೆಲುವಿನ ದಡ ಸೇರಲಿದ್ದಾರೆ. ಬಿಜೆಪಿ ಭದ್ರಕೋಟೆ ಛಿದ್ರವಾಗುವುದೇ ಎಂಬಿತ್ಯಾದಿ ಕುತೂಹಲ ಮನೆ ಮಾಡಿದೆ.
ಕೊಪ್ಪಳ:  ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಮತಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ 58 ಅಭ್ಯರ್ಥಿಗಳು ಕಣದಲ್ಲಿದ್ದು, ಕುಷ್ಟಗಿ ವಿಧಾನಸಭಾ ಕ್ಷೇತ್ರ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ ಕ್ಷೇತ್ರದಲ್ಲಿ ಯಾರಿಗೆ ಜಯ ಲಭಿಸಲಿದೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.  ಇನ್ನು ಅಭ್ಯರ್ಥಿಗಳ ಎದೆಬಡಿತ ಜೋರಾಗಿದ್ದು, ಮತಎಣಿಕೆ ಸಮಯಕ್ಕಾಗಿ ಕಾಯುತ್ತಿದ್ದಾರೆ. ಈ ಸಾರಿ ಹೇಗಾದರೂ ಗೆದ್ದರೆ ನಮ್ಮ ರಾಜಕೀಯ ಭವಿಷ್ಯ ಎಂದು ಲೆಕ್ಕಾಚಾರ ಮಾಡುತ್ತಿದ್ದಾರೆ. ಬಹುತೇಕರಿಗೆ ಗೆಲ್ಲುವ ವಿಶ್ವಾಸ ಇದ್ದರೆ, ಈಗಾಗಲೇ ಅನೇಕರು ನಮ್ಮ ಸೋಲು ಖಚಿತ ಎಂದು ಅಂದುಕೊಂಡಿದ್ದಾರೆ.
ಬಳ್ಳಾರಿ: ಜಿಲ್ಲೆಯ 9 ಕ್ಷೇತ್ರಗಳ ಮತಎಣಿಕೆಗೆ ಸಿದ್ಧತೆ ಪೂರ್ಣಗೊಂಡಿದೆ. ಬೆಳಗ್ಗೆ 11.30 ಗಂಟೆಗೆ ಚುನಾವಣೆಯ ಫಲಿತಾಂಶ ಘೋಷಣೆಯಾಗಲಿದೆ. ನಗರದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಮತಎಣಿಕೆಗೆ 369 ಸಿಬ್ಬಂದಿಯನ್ನು ನೇಮಿಸಿದ್ದು, ಬಳ್ಳಾರಿ ನಗರ ಕ್ಷೇತ್ರಕ್ಕೆ 17 ಸುತ್ತು, ಇನ್ನುಳಿದ ಕ್ಷೇತ್ರಗಳಿಗೆ 15-16 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement