ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೈ ಪಡೆಗೆ ಗೆಲವಿನ ರುಚಿ ತೋರಿಸಿದ ವಿನಯ

Lingaraj Badiger
Updated On : 9 May 2013, 12:08 pm

ಹುಬ್ಬಳ್ಳಿ: ಒಬ್ಬ ಅಭ್ಯರ್ಥಿಗೆ ಎಂದಿಗೂ ಎರಡು ಬಾರಿ ಮಣೆ ಹಾಕದ ಧಾರವಾಡ ಕ್ಷೇತ್ರದ ಮತದಾರ ಈ ಬಾರಿ ತನ್ನ ತೀರ್ಮಾನ ಬದಲಿಸಿದ್ದಾನೆ. ಅದರ ಪರಿಣಾಮವಾಗಿ ಧಾರವಾಡ ಕ್ಷೇತ್ರವನ್ನು ಈ ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಪ್ರತಿನಿಧಿಸಿದ್ದ ವಿನಯ ಕುಲಕರ್ಣಿ, ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮತ್ತೆ ಆಯ್ಕೆಯಾಗಿದ್ದಾರೆ.
ಧಾರವಾಡ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಚುನಾವಣೆ ಫಲಿತಾಂಶದ ಪೈಕಿ ಕಾಂಗ್ರೆಸ್‌ಗೆ ಮೊದಲ ಗೆಲವಿನ ರುಚಿ ತೋರಿಸಿದ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ವಿಜಯೋತ್ಸವ ಕೂಡ ಅಷ್ಟೇ ಅಬ್ಬರದಿಂದ ಕೂಡಿತ್ತು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕೃಷಿ ವಿವಿ ಆವರಣಕ್ಕೆ ಆಗಮಿಸಿದ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಬೆಂಬಲಿಗರು ಹೆಗಲ ಮೇಲೆ ಹೊತ್ತು ಕುಣಿದರು. ನಂತರ ತೆರೆದ ಜೀಪಿನಲ್ಲಿ ಅಪಾರ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದ ಅವರು, ಮತಏಣಿಕೆ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ಹಿಂಬಾಲಕರಿಂದ ವಿನಯ ಕುಲಕರ್ಣಿಗೆ ಜಯವಾಗಲಿ, ಭಾರಿ ನೀರಾವರಿ ಸಚಿವರಿಗೆ ಜಯವಾಗಲಿ ಎಂದು ಘೋಷಣೆ ಹಾಕಿ ತಮ್ಮ ಅಭಿಮಾನ ತೋರ್ಪಡಿಸಿದರು. ವಿಜಯೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ ಕುಲಕರ್ಣಿ, ಧಾರವಾಡ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿಮೀರಿತ್ತು. ಆದ್ದರಿಂದ ಮತದಾರ ಈ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದಾನೆ ಎಂದು ಹೇಳಿದರು.
ಇಡೀ ಕ್ಷೇತ್ರದ ಮತದಾರರು ಎದುರಿಸುತ್ತಿರುವ ಸಮಸ್ಯೆಗಳ ಪೂರ್ಣ ಅರಿವು ಇದೆ. ಈಗಾಗಲೇ ಒಂದು ಬಾರಿ ಶಾಸಕ, ಜಿಪಂ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಬೆನ್ನಿಗಿದೆ. ಈ ಅನುಭವದ ಆಧಾರದ ಮೇಲೆ ಕ್ಷೇತ್ರದ ರೈತರು ಮತ್ತು ಹುಬ್ಬಳ್ಳಿ-ಧಾರವಾಡ ನಗರ ವ್ಯಾಪ್ತಿಯ ಮತದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಯತ್ನಿಸುತ್ತೇನೆ.
ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದ್ದು ಈ ಸಮಸ್ಯೆ ಪರಿಹರಿಸುವುದು ನನ್ನ ಮೊದಲ ಆಧ್ಯತೆ. ಎರಡನೆಯದಾಗಿ ಧಾರವಾಡ ಕ್ಷೇತ್ರದ ವ್ಯಾಪ್ತಿಯ ಕೆರೆಗಳ ಪುನರುಜ್ಜೀವನ ಮತ್ತು ಅಭಿವೃದ್ಧಿಯಲ್ಲಿ ಅವ್ಯವಹಾರವಾಗಿದ್ದು, ಕ್ಷೇತ್ರದ ಎಲ್ಲ ಕೆರೆಗಳನ್ನು ಪರಿಶೀಲಿಸಿ ಕಳಪೆ ಕಾಮಗಾರಿ ಆಗಿರುವ ಕೆರೆಗಳನ್ನು ಮತ್ತೆ ನವೀಕರಣಗೊಳಿಸುವುದರ ಜೊತೆಗೆ ಅವ್ಯವಹಾರವನ್ನು ತನಿಖೆಗೆ ಒಳಪಡಿಸಲಾಗುವುದು. ರೈತರಿಗೆ ಅಗತ್ಯವಾಗಿ ಬೇಕಿರುವ ಹೊಲಗಳ ರಸ್ತೆ ನಿರ್ಮಾಣ, ಬಡವರಿಗೆ ಮನೆಗಳ ಹಂಚಿಕೆ, ಕೆರೆ-ಕಟ್ಟೆಗಳ ನಿರ್ಮಾಣ ಹಾಗೂ ನೀರಾವರಿ ಕುರಿತು ಹೆಚ್ಚಿನ ಗಮನ ಹರಿಸುತ್ತೇನೆ. ಕಳೆದ ಬಿಜೆಪಿ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಭ್ರಷ್ಟಾಚಾರ ನಡೆದಿದ್ದು, ಒಂದೊಂದಾಗಿ ಅವುಗಳ ತನಿಖೆ ನಡೆಸುತ್ತೇನೆ. ಮಾಜಿ ಶಾಸಕಿ ಸೀಮಾ ಮಸೂತಿ ಅವರ ಹಾಗೆ ಹಣ ಮಾಡದೆ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ದುರಾಡಳಿತವೇ ತಮ್ಮ ಗೆಲವಿಗೆ ಸಹಕಾರಿ
ಧಾರವಾಡ: ಕಳೆದ ಐದು ವರ್ಷಗಳಿಂದ ಅಧಿಕಾರ ನಡೆಸಿದ ಬಿಜೆಪಿಯಿಂದ ರಾಜ್ಯದ ಜನತೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದೆ. ಹೀಗಾಗಿ ಬಿಜೆಪಿ ದುರಾಡಳಿತದಿಂದ ಬೇಸತ್ತು ಜನಸಾಮಾನ್ಯರು ಕಾಂಗ್ರೆಸ್ ಕಡೆ ಒಲವು ತೋರಿರುವುದು ಈ ಚುನಾವಣೆ ಫಲಿತಾಂಶದಿಂದಲೇ ತಿಳಿಯುತ್ತದೆ ಎಂದು ಧಾರವಾಡ ಕ್ಷೇತ್ರಕ್ಕೆ ಎರಡನೇ ಬಾರಿಗೆ ಆಯ್ಕೆಯಾದ ಶಾಸಕ ವಿನಯ ಕುಲಕರ್ಣಿ ಹೇಳಿದರು.
ಅಭೂತಪೂರ್ವ ಗೆಲವು ಸಾಧಿಸಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರೈತರಿಗೆ ಅಗತ್ಯವಾಗಿ ಆಗಬೇಕಾದ ಹೊಲಗಳ ರಸ್ತೆ ನಿರ್ಮಾಣ, ಗ್ರಾಮೀಣ ಪ್ರದೇಶಗಳ ಪ್ರಮುಖ ಸಂಪರ್ಕ ರಸ್ತೆ, ಬಡವರಿಗೆ, ನಿರಾಶ್ರಿತರಿಗೆ ಮನೆಗಳ ಹಂಚಿಕೆ, ಕೆರೆ-ಕಟ್ಟೆಗಳ ನಿರ್ಮಾಣ ಹಾಗೂ ನೀರಾವರಿ ಕುರಿತು ಹೆಚ್ಚಿನ ಗಮನ ಹರಿಸುತ್ತೇನೆ. ಕಳೆದ ಬಿಜೆಪಿ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ರೀತಿಯ ಭ್ರಷ್ಟಾಚಾರ ನಡೆದಿದ್ದು, ಒಂದೊಂದಾಗಿ ಅವುಗಳ ತನಿಖೆ ನಡೆಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement