ಧಾರವಾಡ: ರಕ್ತದಾನ ಶಿಬಿರ
ಧಾರವಾಡ: ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕು. ಅದರ ಜೊತೆಗೆ ದಾನ, ಧರ್ಮ, ಭಯ-ಭಕ್ತಿ ರೂಡಿಸಿಕೊಳ್ಳಬೇಕೆಂದು ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿ ಹೇಳಿದರು. ಇಲ್ಲಿನ ಶ್ರೀಗುರು ಬಸವ ಮಹಾಮನೆ ಮನಗುಂಡಿಯಲ್ಲಿ ವಿಶ್ವಗುರು ಬಸವಣ್ಣನವರ ಮತ್ತು ಅಕ್ಕಮಹಾದೇವಿ ಅವರ ಜಯಂತಿ ನಿಮಿತ್ತ ಡಾ.ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಜಿಲ್ಲಾ ನಿವೃತ್ತ ಸರ್ಜನ್ ಡಾ.ವಿ.ಡಿ. ಕರ್ಪೂರಮಠ ಮಾತನಾಡಿ, ಸಂಘಟನೆ ಹಾಗೂ ಶಿಬಿರದಲ್ಲಿ ರಕ್ತದಾನ ಮಾಡುವುದು ಒಂದು ಒಳ್ಳೆಯ ಕೆಲಸ. ರಕ್ತದಾನದಿಂದ ಯಾವ ದುಷ್ಪರಿಣಾಮ ಉಂಟಾಗುವುದಿಲ್ಲ ಬದಲಾಗಿ ಆರೋಗ್ಯ ಇನ್ನಷ್ಟು ಸುಧಾರಿಸುತ್ತದೆ ಎಂದರು. ಶಿಬಿರದಲ್ಲಿ ರಕ್ತ ಭಂಡಾರದ ಅಧಿಕಾರಿ ಡಾ. ಉಮೇಶ ಹಳ್ಳಿಕೇರಿ, ಶಕುಂತಲಾ ಸಿಂಧೂರ, ಪ್ರದೀಪ ಕೇಲಗೇರಿ, ಶರಣಿ ಸುಗುಣಮ್ಮ, ಓಂಕಾರೇಶ್ವರಿ, ಶಾರಧಾ ಕಪ್ಪಲಿ, ಸುಜಾತಾ ಬೆಟಗೇರಿ ಹಾಗೂ ಷಣ್ಮುಖಪ್ಪ ಹರ್ತಿ ಇದ್ದರು.
12ರಂದು ಉಪನ್ಯಾಸ
ಧಾರವಾಡ: ಡಾ.ಕೆ. ಎಸ್. ದೇಶಪಾಂಡೆ ದತ್ತಿ ಉಪನ್ಯಾಸ ಸಮಿತಿ, ರಾ.ಹ. ದೇಶಪಾಂಡೆ ಸಾಂಸ್ಕೃತಿಕ ಕೇಂದ್ರ ಮತ್ತು ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರ ಮೇ 12ರಂದು ಸಂಜೆ 6ಕ್ಕೆ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಡಾ.ಕೆ.ಎಸ್. ದೇಶಪಾಂಡೆ ದತ್ತಿ ಉಪನ್ಯಾಸ ಮಾಲೆ ಅಂಗವಾಗಿ ಅಂತರ್ ಜಾಲ ಮತ್ತು ಚರಕಾ ವಿಷಯ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ಉಪನ್ಯಾಸಕರಾಗಿ ಮಾಜಿ ಪ್ರಧಾನಿ ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ವಿಶೇಷ ಸಲಹೆಗಾರರಾಗಿದ್ದ ಹಾಗೂ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಆಗಮಿಸುತ್ತಾರೆ. ಕರ್ನಾಟಕ ಕಾನೂನು ವಿವಿ ವಿಶ್ರಾಂತ ಕುಲಪತಿ ಪ್ರೊ.ಜೆ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಸಾಹಿತಿಗಳು, ಲೇಖಕರು, ಬುದ್ದಿಜೀವಿಗಳು, ಚಿಂತಕರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ದರ ಏರಿಕೆ: ವಿರೋಧ
ಧಾರವಾಡ: ವಿದ್ಯುತ್ ದರ ಏರಿಕೆ ಮಾಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿರ್ಧಾರವನ್ನು ಎಸ್ಯುಸಿಐ(ಸಿ) ಪಕ್ಷವು ಉಗ್ರವಾಗಿ ಖಂಡಿಸಿದೆ. ಬೆಲೆ ಏರಿಕೆ ಬೇಗೆಯಿಂದ ಬಸವಳಿದ ಜನತೆಗೆ ವಿದ್ಯುತ್ ದರ ಏರಿಕೆ ಮತ್ತೊಂದು ದೊಡ್ಡ ಪ್ರಹಾರ. ಸಾರ್ವಜನಿಕರ ಹಣದಿಂದ ಬೆಳೆದುಬಂದ ವಿದ್ಯುತ್ ನಿಗಮಗಳು ಖಾಸಗಿ ಕಂಪನಿಯಂತೆ ವರ್ತಿಸುತ್ತಿವೆ. ಸಬ್ಸಿಡಿ ದರದಲ್ಲಿ ವಿದ್ಯುತ್ ಸರಬರಾಜು ಮಾಡಬೇಕಾದ ಇಲಾಖೆಯು ನಿರಂತರವಾಗಿ ಬೆಲೆ ಏರಿಕೆ ನೀತಿ ಪಾಲಿಸುತ್ತಿದೆ. ಹೀಗೆ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಕೆ.ಇ.ಆರ್.ಸಿಯ ಆಯೋಗವು ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಂಡು ತನ್ನ ಅಧಿಕಾರಶಾಹಿ ಧೋರಣೆ ಪ್ರದರ್ಶಿಸಿದೆ. ವಿದ್ಯುತ್ ಸರಬರಾಜು, ಸಮಸ್ಯೆಗಳ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಹತ್ತಾರು ಆಶ್ವಾಸನೆಗಳನ್ನು ನೀಡಿದ ಪಕ್ಷಗಳು ಈಗ ಚಕಾರವೆತ್ತುತ್ತಿಲ್ಲವೆಂಬುದು ಗಮನಾರ್ಹ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ)ದ ವಿದ್ಯುತ್ ದರ ಏರಿಕೆಯ ನಿರ್ಧಾರವನ್ನು ಈ ಕೂಡಲೆ ವಾಪಸ್ಸು ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದು ಎಸ್.ಯು.ಸಿ.ಐ (ಸಿ) ಪಕ್ಷವು ಪ್ರಕಟಣೆ ಮೂಲಕ ಎಚ್ಚರಿಸಿದೆ.