ಅಲ್ಲಮಪ್ರಭು ಕಲಾ ಅಕಾಡೆಮಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 10
ಮೈಸೂರಿನ ಉಪಾಧ್ಯ ಕಲಾ ಪ್ರತಿಷ್ಠಾನದ ವತಿಯಿಂದ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿ ಶ್ರೀ ಅಲ್ಲಮಪ್ರಭು ಲಲಿತ ಕಲಾ ಅಕಾಡೆಮಿ ಶ್ರೀ ಅಲ್ಲಮಪ್ರಭು ಲಲಿತ ಕಲಾ ಅಕಾಡೆಮಿ ಶಾಖೆ ತೆರೆಯಲಾಗಿದೆ ಎಂದು ಸಂಸ್ಥೆಯ ಡೀನ್ ಡಾ ಡಿ.ಎ. ಉಪಾಧ್ಯ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಅಲ್ಲಮಪ್ರಭು ಕಲಾ ಅಕಾಡೆಮಿ 23 ಶಾಖೆಗಳನ್ನು ಹೊಂದಿದ್ದು, ಹುಬ್ಬಳ್ಳಿಯ ನೂತನ ಕಲಾ ಅಕಾಡೆಮಿಯಲ್ಲಿ ಕಲೆ, ಸಂಗೀತ ಮತ್ತು ಅನ್ವಯಿಕ ಕಲೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಾಗುವುದು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಅಲ್ಲಮಪ್ರಭು ಕಲಾ ಅಕಾಡೆಮಿಯಲ್ಲಿ ಕಲೆ ಸಂಬಂಧಿತ ಶಿಕ್ಷಣ ನೀಡಲಾಗುತ್ತದೆ. ಆದರೆ ಇದು ದೂರ ಶಿಕ್ಷಣವಲ್ಲ. ಕಲಾಸಕ್ತರಿಗಾಗಿ ನೀಡುವ ಮೌಖಿಕ ಶಿಕ್ಷಣ. ಪ್ರಾಯೋಗಿಕ ತರಗತಿಗಳಿಗೆ ಕಡ್ಡಾಯವಾಗಿ ಹಾಜರು ಇರಬೇಕು. ಸಂಪರ್ಕ ತರಗತಿಗಳಿಗೂ ಹಾಜರಾತಿ ಕಡ್ಡಾಯ ಎಂದು ತಿಳಿಸಿದರು.
ಹುಬ್ಬಳ್ಳಿಯ ಅಲ್ಲಮಪ್ರಭು ಕಲಾ ಅಕಾಡೆಮಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಅನ್ವಯ ಕಲೆ, ಕಲಾ ಇತಿಹಾಸ ಮತ್ತು ಛಾಯಾಚಿತ್ರ ಮತ್ತು ಸ್ತ್ರೀ ಸೌಂದರ್ಯಕಲೆ ವಿಷಯಗಳಲ್ಲಿ ಬಿಎಫ್‌ಎ ಮತ್ತು ಎಂಎಫ್‌ಎ ನೀಡಲಾಗುವುದು. ಹಿಂದುಸ್ತಾನಿ ಮತ್ತು ಕರ್ನಾಟಕ ಸಂಗೀತದಲ್ಲಿ ಬಿ. ಮ್ಯೂಸಿಕ್ ಮತ್ತು ಎಂ. ಮ್ಯೂಸಿಕ್ ಪದವಿ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.
ನಾಟಕ ಕಲೆಯಲ್ಲಿ ಈತನಕ ಡಿಪ್ಲೋಮಾ ಶಿಕ್ಷಣ ಮಾತ್ರ ಲಭ್ಯವಿದ್ದು, ಅಲ್ಲಮಪ್ರಭು ಕಲಾ ಅಕಾಡೆಮಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಪ್ರಥಮ ಬಾರಿಗೆ ನಾಟಕ ಕಲೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ನೀಡಲಾಗುವುದು. ಮೈಸೂರು ವಿವಿ ವತಿಯಿಂದ ಪಿಎಚ್‌ಡಿಗೂ ಅವಕಾಶವಿದೆ ಎಂದು ತಿಳಿಸಿದರು.
ಮೇ 15ರಿಂದ ಹುಬ್ಬಳ್ಳಿಯಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದ ಡಾ ಉಪಾಧ್ಯ, ಭಾರತೀಯ ಕಲೆಗಳು ಉಳಿಯಬೇಕು ಎನ್ನುವ ಉದ್ದೇಶದಿಂದ ಅಕಾಡೆಮಿ ಆರಂಭಿಸಲಾಗಿದ್ದು, ತರಗತಿಗಳು ಶನಿವಾರ ಭಾನುವಾರ ಮತ್ತು ಬುಧವಾರ ಮಾತ್ರ ತರಗತಿಗಳು ನಡೆಯಲಿವೆ. ಇದು ಕಲಾಸಕ್ತರು ಬಿಡುವಿನ ಸಮಯದಲ್ಲಿ ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗಲಿದೆ. ರಾಜ್ಯದ ವಿವಿಧೆಡೆ ಅಲ್ಲಮಪ್ರಭು ಕಲಾ ಅಕಾಡೆಮಿಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ. ಕಂಬಳಿ ಇದ್ದರು.