ಧರ್ಮ ರಕ್ಷಣೆಗೆ ಶಿವಾಜಿ ಹೋರಾಟ: ಶ್ರೀ ಶ್ಲಾಘನೆ
ಹುಬ್ಬಳ್ಳಿ: ಅವಸಾನದ ಅಂಚಿನಲ್ಲಿದ್ದ ಹಿಂದುತ್ವದ ಉಳಿವಿಗಾಗಿ ಛತ್ರಿಪತಿ ಶಿವಾಜಿ ಮಹಾರಾಜರು ನಡೆಸಿರುವ ಹೋರಾಟ ಅವಿಸ್ಮರಣೀಯ ಎಂದು ಎರಡೆತ್ತಿನಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಶಿವಾಜಿ ಜಯಂತಿ ಅಂಗವಾಗಿ ಭಾನುವಾರ ಬೆಳಗ್ಗೆ ಬಾನಿಓಣಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳು ಆರ್ಶೀವಚನ ನೀಡಿದರು. ಹಿಂದುತ್ವ ಹಾಗೂ ಭಾರತೀಯ ಸಂಸ್ಕೃತಿ ಉಳಿದುಕೊಂಡು ಬರಲು ಶಿವಾಜಿ ಮಹಾರಾಜರ ಕೊಡುಗೆ ಅನನ್ಯವಾಗಿದೆ. ಪ್ರತಿಯೊಬ್ಬರೂ ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಹಿಂದುತ್ವದ ಉಳಿವಿಗೆ ಒಗ್ಗಟ್ಟಾಗಿ ಪ್ರಯತ್ನಿಸಬೇಕೆಂದರು. ಯುವಕರು ಇಂದು ಶಿವಾಜಿಗಳಾಗಿ ಕೆಲಸ ಮಾಡುವ ಸಮಯ ಬಂದೊದಗಿದೆ. ಭಾರತೀಯತೆಯೊಂದಿಗೆ ಹಿಂದುತ್ವದ ರಕ್ಷಣೆ ಮಾಡಬೇಕಾದ ಮಹತ್ತರ ಜವಾಬ್ದಾರಿಯನ್ನು ಯುವ ಸಮುದಾಯ ಮೆರೆಯಬೇಕಿದೆ ಎಂದೂ ಶ್ರೀಗಳು ತಿಳಿಸಿದರು. ಸಂಸದ ಪ್ರಹ್ಲಾದ ಜೋಶಿ, ಭಾರತೀಯ ಪರಂಪರೆಯ ಉಳಿಸಿ-ಬೆಳೆಸಿಕೊಂಡು ಬರುವುದರ ಜತನೆ ಹಿಂದುತ್ವದ ಪರಿಪಾಲನೆ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕೆಂದರು. ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಗೆಯಲ್ಲಿ ಶಿವಾಜಿ ಹಾಗೂ ಶ್ರೀ ಬಸವೇಶ್ವರರ ವೇಷಧಾರಿಗಳು ಗಮನ ಸೆಳೆದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಧುಸೂದನ್ ಕುಲಕರ್ಣಿ, ಪಾಲಿಕೆ ಸದಸ್ಯ ಡಿ.ಕೆ. ಚವ್ಹಾಣ, ಅರುಣ ಶಿರ್ಕೆ ಪಾಲ್ಗೊಂಡಿದ್ದರು.