ಬಸವೇಶ್ವರ ಜಯಂತಿ: ಬೈಕ್ ರ್ಯಾಲಿ
ಹುಬ್ಬಳ್ಳಿ: ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಜಗಜ್ಯೋತಿ ಬಸವೇಶ್ವರ ಸಮಿತಿ ವತಿಯಿಂದ ಭಾನುವಾರ ಬೆಳಗ್ಗೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮೂರು ಸಾವಿರ ಮಠದಿಂದ ಆರಂಭವಾದ ಬೈಕ್ ರ್ಯಾಲಿಗೆ ಶ್ರೀಮಠದ ಜಗದ್ಗುರು ಗುರುಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ದಾಜಿಬಾನ ಪೇಟ್, ತುಳಜಾ ಭವಾನಿ ಸರ್ಕಲ್, ದುರ್ಗದ ಬೈಲ್, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೇಶ್ವಾಪುರದಲ್ಲಿರುವ ಶ್ರೀ ಬಸವೇಶ್ವರರ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು. ರ್ಯಾಲಿಯುದ್ದಕ್ಕೂ ಶ್ರೀ ಬಸವೇಶ್ವರರ ಜಯಘೋಷ ಹಾಕಿದ ಕಾರ್ಯಕರ್ತರು, ಬಸವೇಶ್ವರರ ತತ್ವಾದರ್ಶಗಳನ್ನು ಸ್ಮರಿಸಿದರಲ್ಲದೇ ಪ್ರತಿಯೊಬ್ಬರು ಬಸವೇಶ್ವರರ ಆದರ್ಶಗಳನ್ನು ಪಾಲಿಸುವ ಮೂಲಕ ನೆಮ್ಮದಿಯ ಬದುಕು ಸಾಗಿಸುವಂತೆ ಸಂದೇಶಗಳನ್ನು ಸಾರಿದರು. ವಸಂತ ಹೊರಟ್ಟಿ, ಶೇಖರಯ್ಯ ಮಠಪತಿ, ರವಿಕುಮಾರ ಬಡ್ನಿ, ಈರಣ್ಣ ಹಿರೇಹಾಳ, ಈಶ್ವರ ಶಿರಸಂಗಿ ಸೇರಿದಂತೆ ನೂರಾರು ಜನರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.