ಸಂಬಂಧ ಬೆಸೆಯುವ ಹಳೆ ವಿದ್ಯಾರ್ಥಿಗಳ ಸಂಘ
ಧಾರವಾಡ: ಹಳೆಯ ವಿದ್ಯಾರ್ಥಿಗಳ ಸಂಘಗಳು ಪ್ರಸ್ತುತ ಕಲಿಯುತ್ತಿರುವ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಬಂಧ ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತವೆ ಎಂದು ಲೇಖಕ ಬಾಳಣ್ಣ ಸೀಗಿಹಳ್ಳಿ ಅಭಿಪ್ರಾಯಿಸಿದರು. ಕರ್ನಾಟಕ ವಿವಿ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಈ ಸಂಘ ಅಸ್ತಿತ್ವಕ್ಕೆ ಬಂದದ್ದು ಚಾರಿತ್ರಿಕ ಸಂದರ್ಭ. ಇದು ಹೊಸ ಹಾಗೂ ಹಳೆಯ ವಿದ್ಯಾರ್ಥಿಗಳ ಸೇತುವೆಯಾಗಿ ಕೆಲಸ ಮಾಡಬೇಕು. ಈ ಪೀಠ ಹುಟ್ಟಿ 62 ವರ್ಷಗಳಾಗಿವೆ. ಸಾವಿರಾರು ವಿದ್ಯಾರ್ಥಿಗಳು, ಕನ್ನಡ ಪ್ರಾಧ್ಯಾಪಕರು, ವಿವಿಧ ಇಲಾಖೆಗಳ ಅಧಿಕಾರಿಗಳಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರನ್ನು ಈ ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ಸಂಘ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಕನ್ನಡ ಅಧ್ಯಯನ ಪೀಠದ ಹಳೆಯ ವಿದ್ಯಾರ್ಥಿ ಡಾ.ಜಿ.ಎಂ. ಹೆಗಡೆ ಮಾತನಾಡಿ, ಸಂಘ ಒಂದು ಸಾಂಸ್ಕೃತಿಕ ಚಟುವಟಿಕೆಗಳ, ಕನ್ನಡದ ಅಸ್ತಿತ್ವಕ್ಕಾಗಿ ಹೋರಾಡುವ ವೇದಿಕೆಯಾಗಲಿ ಎಂದರು. ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಹಾಗೂ ಪ್ರಸ್ತುತ ಸಂಘದ ಅಧ್ಯಕ್ಷ ಡಾ. ಮಧುವೆಂಕಾರೆಡ್ಡಿ ಮಾತನಾಡಿದರು. ನಂತರ ವಿದ್ಯಾರ್ಥಿಗಳ ಪಾಲಕರೊಂದಿಗೆ ಸಂವಾದ ನಡೆಯಿತು. ರತ್ನಾ ಹಿರೇಮಠ, ಡಾ. ಧನವಂತ ಹಾಜವಗೋಳ, ಡಾ.ಪಿ.ಕೆ. ರಾಠೋಡ ಇದ್ದರು.