ಧಾರವಾಡ: ಕಾಂಗ್ರೆಸ್ ಶಾಸಕರು ನಾಪತ್ತೆ!
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನಾಲ್ವರೂ ಕಾಂಗ್ರೆಸ್ ಶಾಸಕರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ!
ಇದೇನಿದು ಆಶ್ಚರ್ಯ ಅಂತೀರಾ? ದಂಗಾಗಬೇಡಿ, ಇವರನ್ನು ಯಾರೂ ಕಿಡ್ನಾಪ್ ಮಾಡಿಲ್ಲ, ಎಲ್ಲೂ ಕಳೆದು ಹೋಗಿಲ್ಲ. ಚುನಾವಣೆಯಲ್ಲಿ ಗೆದ್ದಿದ್ದೇ ತಡ ಮಿನಿಸ್ಟರ್ ಖುರ್ಚಿ ಅರಸಿಕೊಂಡು ಬೆಂಗಳೂರು-ದಿಲ್ಲಿಯತ್ತ ಮುಖ ಮಾಡಿದ್ದಾರೆ.
ಹೌದು, ಶಾಸಕರಾಗಿ ಆಯ್ಕೆಯಾದರೆ ಸಾಕು ಎನ್ನುತ್ತಿದ್ದವರು ಮೇ 8ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದೇ ತಡ ಕಾಂಗ್ರೆಸ್ ಶಾಸಕರ ಚಿತ್ತ ದೆಹಲಿ, ಬೆಂಗಳೂರನತ್ತ ಹೊರಳಿದೆ. ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಕ್ಕಿದ್ದರಿಂದ ಜಿಲ್ಲೆಯಲ್ಲಿಯೂ ಸಚಿವ ಸ್ಥಾನದ ಆಕಾಂಕ್ಷಿಗಳು ಹುಟ್ಟಿಕೊಂಡರು.
ಬಿಜೆಪಿ ಭದ್ರಕೋಟೆಯನ್ನು ಭೇದಿಸಿದ ಕಾಂಗ್ರೆಸ್ ಜಿಲ್ಲೆಯ ನಾಲ್ಕು ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಕಾಂಗ್ರೆಸ್ ಶಾಸಕರಾಗಿ ಸಂತೋಷ್ ಲಾಡ್, ವಿನಯ ಕುಲಕರ್ಣಿ, ಸಿ.ಎಸ್. ಶಿವಳ್ಳಿ ಹಾಗೂ ಪ್ರಸಾದ ಅಬ್ಬಯ್ಯ ಆಯ್ಕೆಯಾದರು. ಇವರೆಲ್ಲರೂ ಗೆದ್ದಿದ್ದೇ ತಡ ಕ್ಷೇತ್ರ ಬಿಟ್ಟು ಸಚಿವ ಸ್ಥಾನ ಅರಸಿ ಬೆಂಗಳೂರು ಹಾಗೂ ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ವಿನಯ ಕುಲಕರ್ಣಿ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಹಾಗೂ ಮುಂಚೂಣಿಯಲ್ಲಿರುವ ಧಾರವಾಡ ಶಾಸಕ ವಿನಯ ಕುಲಕರ್ಣಿ ಮೇ 10ರಂದು ಬೆಳಗ್ಗೆ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ಬಳಿಕ ದೆಹಲಿ ವಿಮಾನ ಹತ್ತಿದ್ದಾರೆ. ಕಳೆದ ನಾಲ್ಕು ದಿನದಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಅವರು ಶತಾಯುಗತಾಯು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲೇ ಬೇಕು ಎಂದು ಇನ್ನಿಲ್ಲದ ಹರಸಾಹಸದಲ್ಲಿ ತೊಡಗಿದ್ದಾರೆ.
ಸಂತೋಷ್ ಲಾಡ್: ಕಲಘಟಗಿ ಸಂತೋಷ್ ಲಾಡ್ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಫಲಿತಾಂಶ ಪ್ರಕಟವಾದ ದಿನ ಹಾಗೂ ಮೇ 9 ರಂದು ಲಾಡ್ ಕ್ಷೇತ್ರದಲ್ಲಿಯೇ ಬೀಡು ಬಿಟ್ಟಿದ್ದರು. ಕಲಘಟಗಿ ಹಾಗೂ ಅಳ್ನಾವರದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಕ್ಷೇತ್ರದ ಜನತೆಗೆ ಅಭಯ ನೀಡಿದ್ದರು. ಇದಾದ ಬಳಿಕ ಮೇ 9ರ ರಾತ್ರಿ ಬೆಂಗಳೂರು ಬಳಿಕ ಮೇ 10ರ ಸಂಜೆ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಪ್ರಸ್ತುತ ದಿಲ್ಲಿಯಲ್ಲಿ ಸಚಿವ ಸ್ಥಾನಕ್ಕಾಗಿ ತಮ್ಮ ಪರ ಲಾಬಿ ಮಾಡುತ್ತಿದ್ದಾರೆ.
ಸಿ. ಎಸ್. ಶಿವಳ್ಳಿ: ಕುಂದಗೋಳ ಶಾಸಕ ಸಿ. ಎಸ್. ಶಿವಳ್ಳಿಯವರೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ತಾವೂ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು ಸಚಿವ ಪಟ್ಟ ಸಿಗುವ ಹಾದಿ ಸುಗಮವಾಗಲಿದೆ ಎಂಬ ಲೆಕ್ಕಾಚಾರ ಶಿವಳ್ಳಿಯವರದ್ದು. ಈ ನಿಟ್ಟಿನಲ್ಲಿ ಮೇ 9ರ ರಾತ್ರಿಗಾಗಲೇ ಕುಂದಗೋಳ ಬಿಟ್ಟವರು ಬೆಂಗಳೂರು ಸೇರಿಕೊಂಡರು. ಅಲ್ಲಿಂದ ಮೇ 10ರಂದು ದಿಲ್ಲಿಗೆ ಹಾರಿದ್ದಾರೆ. ಸಚಿವ ಸ್ಥಾನದ ಸಾಧ್ಯಾಸಾಧ್ಯತೆ ಬಗೆಹರಿಯುವರೆಗೆ ಕ್ಷೇತ್ರಕ್ಕೆ ಮರಳುವುದಿಲ್ಲ ಎಂದು ನಿಕಟವರ್ತಿಗಳಿಗೆ ತಿಳಿಸಿದ್ದಾರೆ.
ಪ್ರಸಾದ ಅಬ್ಬಯ್ಯ: ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಎಲ್ಲರಿಗಿಂತಲೂ ಒಂದು ಕೈ ಮುಂದಿದ್ದಾರೆ. ಮೇ 9ರ ಮಧ್ಯಾಹ್ನದ ಹೊತ್ತಿಗಾಗಲೇ ಬೆಂಗಳೂರಿಗೆ ಹೋಗಿ ಬಿಡು ಬಿಟ್ಟಿದ್ದರು. ಆದರೆ ಅವರು ದಿಲ್ಲಿ ಪ್ರವಾಸ ಮಾತ್ರ ಮೇ 13ರಂದು ಸಂಜೆ ಕೈಗೊಂಡರು. ಪ್ರಸಾದ ಅಬ್ಬಯ್ಯ ಪ್ರಥಮ ಬಾರಿ ಶಾಸಕರಾಗಿ ಆಯ್ಕೆಯಾದರೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.
ತಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನತೆಯನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದ ಅರೆಗಳಿಗೆಯಲ್ಲಿಯೇ ಕ್ಷೇತ್ರದ ಜನತೆಗೆ ದರ್ಶನ ನೀಡದೇ ಎಲ್ಲರೂ ದೆಹಲಿಯಲ್ಲಿ ಠಿಕಾಣಿ ಹೂಡಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವುದು ಮೋಜಿನಂತಾಗಿದೆ.
ಈ ನಡುವೆ ಕ್ಷೇತ್ರದ ಜನತೆ ಮಾತ್ರ ತಾವು ಆಯ್ಕೆ ಮಾಡಿ ಕಳುಹಿಸಿದ ಶಾಸಕರು ಎಂದು ದರ್ಶನ ನೀಡುತ್ತಾರೆಂದು ಕಾದು ಕುಳಿತಿದ್ದಾರೆ.
ಪ್ರಕಾಶ ಎಸ್. ಶೇಟ್