ಹು-ಧಾಗೆ ಪ್ರತ್ಯೇಕ ಸಚಿವ ಸ್ಥಾನ ನೀಡಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 14
ಹುಬ್ಬಳ್ಳಿ-ಧಾರವಾಡಕ್ಕೆ ಪ್ರತ್ಯೇಕ ನಗರಾಭಿವೃದ್ಧಿ ಇಲಾಖೆ ಹಾಗೂ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ನಗರದ ಹೊಸಮಠದ ಜಗದ್ಗುರು ಶ್ರೀ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು.
ಹಿಂದಿನ ಸರ್ಕಾರಗಳು ಅವಳಿ ನಗರದ ಅಭಿವೃದ್ಧಿಗೆ ಪೂರಕ ಕೆಲಸ ಕೈಗೊಂಡಿಲ್ಲ. ಮಹಾನಗರದಲ್ಲಿ ಶಿಕ್ಷಣ, ವಾಣಿಜ್ಯ, ಕ್ರೀಡೆ ಮತ್ತಿತರ ರಂಗಗಳ ಬೆಳವಣಿಗೆ ಕುಂಠಿತಗೊಂಡಿದೆ. ಇಂತಹ ನಗರಕ್ಕೆ ಒಂದೇ ಒಂದು ಫ್ಲೈ ಓವರ್ ಇಲ್ಲ. ಇಕ್ಕಟ್ಟಾದ ಧೂಳು ತುಂಬಿದ ರಸ್ತೆಗಳಿಂದಾಗಿ ಉದ್ಯಮಿಗಳು ಉದ್ಯಮ ಸ್ಥಾಪನೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಶ್ರೀಗಳು ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದರು.
ನೂತನ ಸರ್ಕಾರ ರಾಜ್ಯದ ಎಲ್ಲ ಭಾಗಗಳಿಗೆ ಸಚಿವ ಸಂಪುಟದಲ್ಲಿ ಸಮನಾದ ಪ್ರಾತಿನಿಧ್ಯ ನೀಡಬೇಕು. ಅವಳಿ ನಗರಕ್ಕೆ ಸಚಿವ ಸ್ಥಾನ ನೀಡುವ ಜೊತೆಗೆ ಇಲ್ಲಿಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು. ಶಾಸಕ ಪ್ರಸಾದ ಅಬ್ಬಯ್ಯ, ಗಂಗಾಧರ ದೊಡವಾಡ, ನೀಲಕಂಠ ಅಸೂಟಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.