ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕುಂದಗೋಳ: ತಪ್ಪದ ನೀರಿನ ಬವಣೆ

Mainashree
Updated On : 17 May 2013, 10:30 am

ಕನ್ನಡಪ್ರಭ ವಾರ್ತೆ, ಕುಂದಗೋಳ, ಮೇ 16
ಯಾವ ಸರ್ಕಾರ ಬಂದ್ರೆ ಏನ್? ನಮ್ಮ ತಾಲೂಕನ್ಯಾಗ ಕುಡ್ಯೋ ನೀರಿನ ಸಮಸ್ಯೆ ಮಾತ್ರ ತಪ್ಪೋದಿಲ್ಲ...
ತಾಲೂಕಿನ ಯಾವ ಗ್ರಾಮದ ಯಾವ ವ್ಯಕ್ತಿಯನ್ನು 'ನಿಮ್ಮ ಊರಾಗ ನೀರಿನ ಸ್ಥಿತಿ ಹೆಂಗೈತಿ' ಎಂದು ಪ್ರಶ್ನಿಸಿದಾಗ ಬರುವ ಬೇಸರದ ಉತ್ತರವಿದು.
ತಾಲೂಕಿನಲ್ಲಿ ಬಹುತೇಕ ಗ್ರಾಮಗಳು ಕೆರೆಯ ನೀರನ್ನು ಅವಲಂಬಿಸಿದ್ದರಿಂದ ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ತಪ್ಪಿದ್ದಲ್ಲ. ಕೊಳವೆ ಬಾವಿ ಕೊರೆಸಿದರೆ ಸವಳು ನೀರು ಬರುತ್ತಿದ್ದು, ಕುಡಿಯಲು ಯೋಗ್ಯವಿಲ್ಲವೆಂದು ಸರ್ಕಾರಿ ಅಧಿಕಾರಿಗಳೇ ಸರ್ಟಿಫೀಕೆಟ್ ಕೊಡುತ್ತಾರೆ. ಪ್ರತಿ ವರ್ಷ ಮಳೆರಾಯ ಕೃಪೆ ತೋರಿದರೆ ಮಾತ್ರ ತಾಲೂಕಿನ ಎಲ್ಲ ಗ್ರಾಮಗಳು ನಿಟ್ಟುಸಿರು ಬಿಡುತ್ತವೆ. ಆದರೆ, ಕಳೆದ ಎರಡು ವರ್ಷಗಳಿಂದ ಸಮರ್ಪಕ ಮಳೆ ಆಗದ್ದರಿಂದ ಪ್ರಸ್ತುತ ಕೆರೆಗಳು ಬತ್ತಿ ಹೋಗಿದ್ದು, ನೀರಿಗೆ ಹಾಹಾಕಾರ ಎದ್ದಿದೆ.
ವಿಶೇಷವಾಗಿ ಸಂಶಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕಡಪಟ್ಟಿ, ಅಲ್ಲಪುರ, ಗುಡೇನಕಟ್ಟಿ, ಯರಿನಾರಾಯಣಪುರ, ಯರಗುಪ್ಪಿ, ಚಿಕ್ಕನರ್ತಿ, ಹಿರೇನರ್ತಿ, ಮುಳ್ಳೊಳ್ಳಿ, ಬೆನಕನಹಳ್ಳಿ, ಬಸಾಪುರ, ಚಾಕಲಬ್ಬಿ, ಬರದ್ವಾಡ, ಕೊಡ್ಲಿವಾಡ, ಕೊಂಕಣ ಕುರಹಟ್ಟಿ, ರೊಟ್ಟಿಗವಾಡ ಸೇರಿದೆತ ಕೆಲ ಗ್ರಾಮಗಳಲ್ಲಿ ಪ್ರತಿ ಬೇಸಿಗೆಯಲ್ಲಿ ನೀರಿಗೆ ಬರ ಇದ್ದೆ ಇರುತ್ತದೆ. ದನಕುರಗಳಿಗೆ ಕುಡಿಯಲು ಹಾಗೂ ಜನತೆಗೆ ಬಳಸಲು ನೀರು ಪಡೆಯಬೇಕಾದರೆ ವಿದ್ಯುತ್ ಕೊರತೆಯಿಂದ ಕೊಳವೆ ಬಾವಿ ನೀರೂ ಸಹ ಸಿಗದಂತಹ ಸ್ಥಿತಿ ಈ ಗ್ರಾಮಗಳಲ್ಲಿ ಉಂಟಾಗಿದೆ. ಇನ್ನು ಬಹುತೇಕ ಕೆರೆ-ಕಟ್ಟೆಗಳು ಹೂಳಿನ ತುಂಬಿದ್ದು, ಮಳೆಗಾಲದಲ್ಲಿ ನೀರು ಬರುವ ಮಾರ್ಗಗಳು ಕಾಣದಾಗಿವೆ. ಮಳೆಗಾಲದಲ್ಲಿ ಕೆರೆಗಳಿಗೆ ಸಮರ್ಪಕ ನೀರು ಸಂಗ್ರಹವಾಗುತ್ತಿಲ್ಲ ಎನ್ನುವುದು ಕಟು ಸತ್ಯ.
ತಾಲೂಕಿನ ಯರಗುಪ್ಪಿ ಸೇರಿದಂತೆ 14 ಹಳ್ಳಿಗಳಿಗೆ ಕೋಟ್ಯಂತರ ರುಪಾಯಿ ಖರ್ಚಿನಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿದ್ದರು. ಆದರೆ, ಕಾಮಗಾರಿ ಮಾತ್ರ ಆಮೆವೇಗದಲ್ಲಿ ಸಾಗುತ್ತಿದೆ. ಇದೀಗ ಹೊಸ ಸರ್ಕಾರ ತುಸು ಭರವಸೆ ಮೂಡಿಸಿದ್ದು, ತಾಲೂಕಿನ ನೀರಿನ ಬವಣೆ ತೀರುವುದು ಎಂಬುದನ್ನು ಕಾದು ನೋಡಬೇಕಿದೆ.
ಪ್ರಸ್ತುತ ತಾಲೂಕಿನ ಹೀರೆನರ್ತಿ ಗ್ರಾಮದಲ್ಲಿ ನೀರಿಗೆ ತತ್ವಾರ ಉಂಟಾಗಿದೆ. ಸುಮಾರು 5-6 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದ ಕೆರೆಗಳು ಸಂಪೂರ್ಣ ಬತ್ತಿದ್ದು, ಈಗ 10 ಕಿ.ಮೀ. ದೂರದ ಸಂಶಿಯಿಂದ ನೀರು ಪೂರೈಕೆ ಆಗುತ್ತಿದೆ. ಈ ನೀರು ಬಕಾಸುರನ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಗ್ರಾಮದ ದೊಡ್ಡಕೆರೆ, ಚಿಕ್ಕಕೆರೆ ಬತ್ತಿದ್ದು, ತಗ್ಗಿನಲ್ಲಿ ನಿಂತ ಕೆಸರು ನೀರೇ ಈ ಗ್ರಾಮದ ಜನತೆಗೆ ಗತಿ. ಕೊಳವೆ ಬಾವಿಯಿಂದ ಆಗಾಗ ಕೆಲ ಬಿಂದಿಗೆ ನೀರು ಬರುತ್ತಿದ್ದು, ಜಾನುವಾರುಗಳಿಗೆ ಮತ್ತು ದಿನಬಳಕೆಗೆ ಸಾಕಾಗದಂತಾಗಿದೆ. ಈ ಮೊದಲು ತಾಲೂಕಾಡಳಿತದಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಅಕಾಲಿಕ ಮಳೆಯಿಂದ ಕೆರೆಯ ತಗ್ಗು ಪ್ರದೇಶದಲ್ಲಿ ತುಸು ನೀರು ನಿಂತಿದ್ದರಿಂದ ನಾಲ್ಕು ತಿಂಗಳ ಹಿಂದೆ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ. ಇದರಿಂದ ಗ್ರಾಮದ ಜನತೆಗೆ ತೀವ್ರ ತೊಂದರೆಯಾಗಿದೆ.
ನಮ್ಮ ಓಣಿಯ ನಲ್ಲಿಯಲ್ಲಿ ಕೇವಲ 2ರಿಂದ 5 ಬಿಂದಿಗೆ ನೀರು ಬರುತ್ತದೆ. ಇದರಿಂದ ಹೇಗೆ ಜೀವನ ಮಾಡಬೇಕು. ಓಣಿಯಲ್ಲಿ ಸುಮಾರು 300 ಕುಟುಂಬಗಳು ವಾಸಿಸುತ್ತಿದ್ದು, ಎಲ್ಲ ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ಗ್ರಾಮದ ಮಲ್ಲಿಕ್ ಬುಕಿಟಗಾರ ಬೇಸರ ವ್ಯಕ್ತಪಡಿಸುತ್ತಾರೆ.
ಈ ಕುರಿತು ಹೀರೆನರ್ತಿ ಗ್ರಾಪಂ ಪಿಡಿಓ, ಜಿ.ಎಸ್. ಜೋಗಿ ಅವರನ್ನು ಪ್ರಶ್ನಿಸಿದರೆ, ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದು ನಿಜ. ಸದ್ಯ ಸಂಶಿಯಿಂದ ಪೈಪ್‌ಲೈನ್ ಮೂಲಕ ನೀರು ಕೊಡುತ್ತಿದ್ದರೂ ಸಾಕಾಗುತ್ತಿಲ್ಲ. ಆದ್ದರಿಂದ ತಹಸೀಲ್ದಾರ್‌ಗೆ ತಿಳಿಸಿ ಮುಂಚಿನಂತೆ ಟ್ಯಾಂಕರ್ ಮೂಲಕ ನೀರು ತರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ತಾಲೂಕಿನ ಈ ಗ್ರಾಮ ಉದಾರಹಣೆ ಅಷೇ. ತಾಲೂಕಿನ ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ತಾಲೂಕು ಆಡಳಿತ ಕೂಡಲೇ ಸ್ಪಂದಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಶೀತಲ ಎಸ್. ಮುರಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement