ತಾಯಿ, ಹೆಂಡತಿಗೆ ವಿಶೇಷ ಸ್ಥಾನ
ಧಾರವಾಡ: ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಮತ್ತು ಹೆಂಡತಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ತಾಯಿ ಹೃದಯವಂತಿಕೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಹೊಂದಿರುತ್ತಾಳೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಜಿ. ಮೂಲಿಮನಿ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಮಹಿಳಾ ಮಂಟಪ ಏರ್ಪಡಿಸಿದ್ದ ಸಾಧನೆಯ ಹಿಂದಿನ ಸ್ತ್ರೀಶಕ್ತಿ ಅಭಿನಂದನಾ ಮಾಲಿಕೆ-3ರ ಕಾರ್ಯಕ್ರಮದಲ್ಲಿ ಡಾ. ಎಂ.ಐ. ಸವದತ್ತಿ ದಂಪತಿಯನ್ನು ಅಭಿನಂದಿಸಿ ಮಾತನಾಡಿದ ಅವರು, ಜನನಕ್ಕೆ ಕಾರಣಳಾದ ತಾಯಿ ನಮ್ಮನ್ನು ಮನುಷ್ಯರನ್ನಾಗಿ ರೂಪಿಸಿ ಸಮಾಜಕ್ಕೆ ನೀಡಿದರೆ, ಹೆಂಡತಿ ಮುಂದಿನ ಬದುಕನ್ನು ರೂಪಿಸಲು ಕಾರಣಳಾಗಬೇಕು ಎಂದರು. ಡಾ. ಅಕ್ಕಮಹಾದೇವಿ ಸಂಕನಗೌಡರ ಮಾತನಾಡಿ, ವ್ಯಕ್ತಿಯ ಸಹೃದಯತೆಯಿಂದ ಕೆಲಸ ಮಾಡುವ ಸ್ತ್ರೀಶಕ್ತಿಯ ಪಾತ್ರ ಬಹಳ ದೊಡ್ಡದು. ಪತಿಯ ಬೇಕು ಬೇಡಗಳಿಗೆ ಪೂರಕವಾಗಿ ಸ್ಪಂದಿಸಬೇಕಿರುವುದು ಪತ್ನಿಯ ಧರ್ಮವಾಗಿದೆ. ಅಲ್ಲದೇ, ಎಂತಹ ಕಷ್ಟದ ಸಮಯದಲ್ಲೂ ಸಹ ಗಂಡನ ಕೈಬಿಡದೆ ಸದಾ ಪತಿಯ ಶ್ರೆಯಸ್ಸಿಗೆ ಶ್ರಮಿಸುತ್ತಿರಬೇಕು ಎಂದರು.
ಡಾ. ಎಂ.ಐ. ಸವದತ್ತಿ ಮಾತನಾಡಿ, ಮನೆಯಲ್ಲಿ ಹೆಣ್ಣುಮಕ್ಕಳ ಮೇಲೆ ಜವಾಬ್ದಾರಿ ಹೆಚ್ಚು, ಪುರಷರು ಬುದ್ಧಿಶಕ್ತಿಯಿಂದ ಯಾವುದೇ ಒಂದು ವಿಷಯ ವಸ್ತುವಿನ ಕುರಿತು ಚಿಂತನೆ ನಡೆಸಿದರೆ, ಸ್ತ್ರೀಯರು ಹೃದಯದಿಂದ ವಿಚಾರ ಮಾಡುತ್ತಾರೆ. ನನ್ನ ಕೈಹಿಡಿದು ನಡೆಸಿ, ಬೆಳೆಸಿದ ನಂತರ 50 ವರ್ಷಗಳ ನನ್ನ ಜೀವನವನ್ನು ಹಗುರಮಾಡಿ ಸುಖ-ದುಃಖಗಳನ್ನು ನಗು ನಗುತ್ತಾ ಸಮನಾಗಿ ಸ್ವೀಕರಿಸಿದ ಪತ್ನಿ ಸುಮಿತ್ರಾ ಅವರನ್ನು ಮನತುಂಬಿ ಅಭಿನಂದಿಸಿದರು.
ಸುಮಿತ್ರಾ ಸವದತ್ತಿ ಹಾಗೂ ಕವಿವಿ ವಿಶ್ರಾಂತ ಕುಲಪತಿ ಡಾ. ಎಸ್.ಕೆ. ಸೈದಾಪೂರ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಿವಣ್ಣ ಬೆಲ್ಲದ, ಮೋಹನ ನಾಗಮ್ಮನವರ ಇದ್ದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಾರದಾ ಕೌದಿ ವಂದಿಸಿದರು. ವತ್ಸಲಾ ಕುಲಕರ್ಣಿ ನಿರೂಪಿಸಿದರು.