ನಿವೃತ್ತಿ ನಂತರದ ಸೌಲಭ್ಯ ಕುರಿತ ಪುಸ್ತಕ ಬಿಡುಗಡೆ
ಧಾರವಾಡ: ವರ್ತಮಾನದಲ್ಲಿ ಮಾಹಿತಿಯೇ ಮುಖ್ಯವಾಗಿದೆ. ವೃತ್ತಿಯಿಂದ ನಿವೃತ್ತರಾದವರಿಗೆ ಸಮರ್ಪಕ ಮಾಹಿತಿ ಪೂರೈಸುವ ಮೂಲಗಳು ದೊರೆಯದೇ ಇರುವ ಸಂದರ್ಭದಲ್ಲಿ ನಿವೃತ್ತಿಯ ನಂತರದ ಸೌಲಭ್ಯಗಳ ಕುರಿತ ಪುಸ್ತಕ ಪ್ರಕಟಿಸಿದ ಪ್ರೊ. ಬಿ.ಆರ್. ಹವಿನಾಳೆ ಎಲ್ಲ ಸರ್ಕಾರಿ ನೌಕರರಿಗೆ ಉಪಕಾರ ಮಾಡಿದಂತಾಗಿದೆ ಎಂದು ಹಿರಿಯ ವಿದ್ವಾಂಸ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ ಹಮ್ಮಿಕೊಂಡ ಪ್ರೊ. ಬಿ.ಆರ್. ಹವಿನಾಳೆ ಅವರು ಬರೆದ ನಿವೃತ್ತಿ ಸೌಲಭ್ಯಗಳು (ಕಿರುನೋಟ) ಹಾಗೂ ರಿಟೈರ್‌ಮೆಂಟ್ ಬೆನೆಫಿಟ್ಸ ಆಟ್ ಎ ಗ್ಲ್ಯಾನ್ಸ್ (ಪರಿಷ್ಕೃತ ಆವೃತ್ತಿ) ಇಂಗ್ಲಿಷ್ ಹಾಗೂ ಕನ್ನಡ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸರ್ಕಾರಿ ರಂಗವೇ ಆಗಲಿ, ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ರಂಗವೇ ಇರಲಿ. ಎಷ್ಟೇ ಉನ್ನತ ಹುದ್ದೆಯಿಂದ ನಿವೃತ್ತಿ ಪಡೆದರೂ ನಿವೃತ್ತಿ ವೇತನದ ಕಾಗದ ಪತ್ರಗಳಿಗಾಗಿ ಅಲ್ಲಿರುವ ಅಲ್ಪ ಸ್ವಲ್ಪ ಗೊತ್ತಿರುವ ಕಾರಕೂನರನ್ನೇ ಅವಲಂಬಿಸಬೇಕಾಗಿದೆ. ಅರ್ಧಕ್ಕಿಂತ ಹೆಚ್ಚು ನಿವೃತ್ತ ನೌಕರರು ತಮಗಿರುವ ಸೌಲಭ್ಯಗಳ ಅರಿವಿರದೇ ಸಮರ್ಪಕ ಪಿಂಚಣಿ ಪಡೆಯದೇ ಹಾನಿಗೀಡಾಗುತ್ತಿದ್ದಾರೆ. ಅಂಥವರಿಗೆ ಮಾರ್ಗದರ್ಶಿಯಾಗಿ ಈ ಕೃತಿ ಕಾರ್ಯ ನಿರ್ವಹಿಸಲಿದೆ ಎಂದರು.
ಪ್ರೊ. ಬಿ.ವಿ. ಗುಂಜೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಅನ್ಬನ್ ಕೃತಿ ಪರಿಚಯಿಸಿದರು. ರೀತು ಹವಿನಾಳೆ, ಆರ್.ಎಸ್. ಸಾಲಿಮಠ, ಮೋಹನ ನಾಗಮ್ಮನವರ ಪ್ರೊ. ಎಸ್.ಎಸ್. ಬೀಳಗಿ ಇದ್ದರು.