ಮಕ್ಕಳ ಸಾಹಿತ್ಯದ ಬಗ್ಗೆ ತಿರಸ್ಕಾರ ಬೇಡ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 16
ದೊಡ್ಡ ದೊಡ್ಡ ಸಾಹಿತಿಗಳು ಮಕ್ಕಳ ಸಾಹಿತ್ಯದ ಬಗ್ಗೆ ತಳೆದ ತಿರಸ್ಕಾರ ಭಾವ ವಿಷಾದನೀಯ. ಆದರೆ, ಕುವೆಂಪು, ಕಾರಂತರು, ಪಂಜೆ ಮುಂತಾದವರು ಮಕ್ಕಳ ಸಾಹಿತ್ಯ ಬರೆದರು. ಮುಂದೆ ಬಂದಂತಹ ಸಾಹಿತಿಗಳಿಗೆ ಈ ಪರಂಪರೆಯಾಗಲಿ, ಒಲುವಾಗಲಿ ಬರಲಿಲ್ಲ ಎಂದು ಸಾಹಿತಿ ನಾ. ಡಿಸೋಜಾ ಅಭಿಪ್ರಾಯಿಸಿದರು.
ಚಿಲಿಪಿಲಿ-ಗುಬ್ಬಚ್ಚಿಗೂಡು ಬಳಗ ಗುರುವಾರ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯ-ಮರು ಚಿಂತನ ರಾಜ್ಯಮಟ್ಟದ ಚಿಂತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಹಿತ್ಯದಲ್ಲಿ ದೊಡ್ಡವರ ಸಾಹಿತ್ಯ, ಮಕ್ಕಳ ಸಾಹಿತ್ಯ ಎಂದೇನೂ ಹಿಂದೆ ಇರಲಿಲ್ಲ. ಇಂಗ್ಲಿಷ್ಸಂಪರ್ಕಿದಿಂದ ಇದು ಬಂದಿತು ಎಂದರು.
ಹಿಂದಿ, ಬಂಗಾಲಿಯಲ್ಲಿ ಶಿಶು ಸಾಹಿತ್ಯ, ಬಾಲ ಸಾಹಿತ್ಯ ಹಾಗೂ ಕಿಶೋರ ಸಾಹಿತ್ಯವೆಂಬ ಮೂರು ಪ್ರಕಾರ ಕಾಣಬಹುದಾಗಿದೆ. ಮಗು ಪ್ರೌಢಾವಸ್ಥೆಗೆ ಬಂದ ಮೇಲೆ ಪ್ರೌಢ ಸಾಹಿತ್ಯದೊಂದಿಗೆ ಸಾಗುತ್ತದೆ. ಬಹಳ ಜನ ಲೇಖಕರು ಮಕ್ಕಳಿಗಾಗಿ ಏನೋ ಬರೆಯಬೇಕು ಎಂದು ಬರೆದಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚು ಪ್ರಯೋಗಗಳು ನಡೆಯದ ಕಾರಣ ಕೊರತೆ ಅನುಭವಿಸುತ್ತಿದೆ. ಮಕ್ಕಳು ಕಥೆಯನ್ನು ಕಥೆಯಾಗಿ ನೋಡಬಯಸುತ್ತಾರೆ. ಪಂಚತಂತ್ರದಲ್ಲಿ ಬರುವ ಪ್ರಾಣಿ ಪಾತ್ರಗಳು ಮಕ್ಕಳಿಗೆ ಇಷ್ಟವಾಗುತ್ತವೆ. ಯಾವ ಮಗುವೂ ಪ್ರಾಣಿಗಳು ಮಾತನಾಡುತ್ತವೆಯೆಂದು ಭಾವಿಸುವುದಿಲ್ಲ. ಮಕ್ಕಳ ಲೋಕದಲ್ಲಿ ರಾಜಕೀಯ ಬರಬಾರದು ಹಾಗೆ ಆಗುವುದರಿಂದ ಆ ಕ್ಷೇತ್ರಕ್ಕೆ ದೊಡ್ಡ ಅನ್ಯಾಯ ಮಾಡಿದಂತೆ. ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ತೊಡಗಿಸಿಕೊಳ್ಳುವಂತವರನ್ನು ಸರ್ಕಾರ ಗುರುತಿಸಿ ಅಂಥವರ ಸೇವೆ ದೊರಕುವಂತಾಗಬೇಕು ಎಂದರು.
ಕರ್ನಾಟಕ ವಿವಿ ಕುಲಪತಿ ಪ್ರೊ. ಎಚ್.ಬಿ. ವಾಲೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇಂದಿನ ಶಿಕ್ಷಕರಿಗಾಗಿ ಮಕ್ಕಳ ಸಾಹಿತ್ಯ ಸಂವಹನ ಶಿಬಿರ ಮಾಡಬೇಕಾದ ತುರ್ತು ಅಗತ್ಯವಿದೆ. ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಒಂದು ರೀತಿಯ ಕೃತ್ರಿಮ ಶಿಸ್ತನ್ನು ಅವರ ಮೇಲೆ ಹೇರುತ್ತಿದ್ದೇವೆ. ಒಂದು ವರ್ಷದ ಕೂಸಿಗೂ ಸಹ ನಿರ್ಬಂಧಗಳ ಗೋಡೆಗಳನ್ನು ಇಂದಿನ ತಾಯಂದಿರು ಕಟ್ಟಿ ಮಕ್ಕಳನ್ನು ಕುಬ್ಜರನ್ನಾಗಿ ಮಾಡುತ್ತಿದ್ದಾರೆ. ಅತಿ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುವುದು ಒಳ್ಳೆಯ ಕ್ರಮವಲ್ಲ. ಮಕ್ಕಳ ಸಾಹಿತಿಗಳು ಕೇವಲ ಮಕ್ಕಳಿಗಾಗಿ ಬರೆಯದೇ ಮಕ್ಕಳನ್ನು ಬೆಳೆಸುವ ಮತ್ತು ನೋಡುವ ಕುರಿತಂತೆ ಪಾಲಕರಿಗೆ ಮಾರ್ಗದರ್ಶಿಯಾದ ಸಾಹಿತ್ಯ ರಚಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಕಾಶವಾಣಿ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ, ರೇಡಿಯೋ ಮೂಲಕ ಮಕ್ಕಳ ಪುಸ್ತಕ ಪರಿಚಯ, ಮಕ್ಕಳ ಕಾರ್ಯಕ್ರಮ ಮಾಡಲು ಬದ್ಧರಾಗಿದ್ದೇವೆ. ಮೀಡಿಯಾವನ್ನು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಮರ್ಪಕವಾಗಿ ಬಳಸಿಕೊಳ್ಳದೇ ನಿಸ್ತೇಜ ಕೇಳುಗರಾಗಿ, ನೋಡುಗರಾಗಿ ಕೂಡುವುದು ಒಳ್ಳೆಯದಲ್ಲ. ಮಾಧ್ಯಮವನ್ನು ಸಮರ್ಥವಾಗಿ ಅಷ್ಟೇ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವವರು ಜಾಹೀರಾತುದಾರರು ಎಂದರು. ಹಾಗೇ ಮಕ್ಕಳ ಸಾಹಿತ್ಯದತ್ತ ಆಕರ್ಷಕವಾಗುವಂತೆ ಮಾಧ್ಯಮಗಳನ್ನು ಬಳಸಬೇಕು ಎಂದರು. ಚಿಲಿಪಿಲಿ ಪ್ರಕಾಶನ-ಗುಬ್ಬಚ್ಚಿಗೂಡು ಬಳಗದ ಸಂಸ್ಥಾಪಕರಾದ ಶಂಕರ ಹಲಗತ್ತಿ ಸ್ವಾಗತಿಸಿದರು. ಲಿಂಗರಾಜ ರಾಮಾಪೂರ ನಿರೂಪಿಸಿದರು. ಡಾ. ನಿಂಗು ಸೊಲಗಿ ವಂದಿಸಿದರು.