ಸಿದ್ದಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ: ಮನವಿ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 16
ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಿದ್ದಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಕಲಘಟಗಿ ತಾಲೂಕಿನ ಸಿದ್ದಿ ಬಡುಕಟ್ಟು ಜನಾಂಗದ ಹಿತ ಹೋರಾಟ ಸಮಿತಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಲಘಟಗಿ ತಾಲೂಕಿನ ಡೋಮಗೊಳ್ಳಿ, ಬೈಚವಾಡ್, ಕಂದ್ಲಿ, ಮಸಳಿಕಟ್ಟಿ, ಜುಂಜರಬೈಲ್, ಸಂಗಮೇಶ್ವರ, ದೇವಿಕೊಪ್ಪ, ಸಂಗಟಿಕೊಪ್ಪ, ಸೂಳಿಕಟ್ಟಿ, ತಂಬೂರ ಮತ್ತು ಮಾವಿನಕೊಪ್ಪದಲ್ಲಿ ಹಲವಾರು ವರ್ಷಗಳಿಂದ ಸಿದ್ದಿ ಜನಾಂಗದವರು ವಾಸಿಸುತ್ತಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಈ ಜನಾಂಗ ತುಂಬಾ ಹಿಂದುಳಿದಿದೆ. ಅರಣ್ಯ ಪ್ರದೇಶದಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ಕೃಷಿ ಕೂಲಿ, ಅರಣ್ಯ ಕೂಲಿ, ಪಶುಸಂಗೋಪನೆ ಮಾಡಿ ಅದರಿಂದ ಬರುವ ಅಲ್ಪ ಆದಾಯದಲ್ಲಿ ಕಷ್ಟಕರ ಜೀವನ ನಡೆಸುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾದ್ಯಂತ ವಾಸಿಸುತ್ತಿರುವ ಸಿದ್ದಿ ಜನಾಂಗವನ್ನು ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ, ಬೆಳಗಾವಿಯ ಖಾನಾಪುರ ತಾಲೂಕಿನ ಸಿದ್ದಿ ಜನಾಂಗವನ್ನು ಮಾತ್ರ ಈ ಪಂಗಡಕ್ಕೆ ಸೇರಿಸಿಲ್ಲ. ಈ ಮೂರು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಿದ್ದಿ ಜನಾಂಗದವರು ಒಂದೇ ಮೂಲದವರಾಗಿದ್ದು, ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ತಾಲೂಕುಗಳಲ್ಲಿ ವಾಸಿಸುತ್ತಿದ್ದಾರೆ. ಒಂದೇ ಮೂಲದ ಜನಾಂಗ ಇದ್ದರೂ ಸಹ ಸರ್ಕಾರ ಈ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಪರಿಶಿಷ್ಟ ಪಂಗಡ ಸ್ಥಾನಮಾನ ನೀಡಿದರೆ ಜನಾಂಗ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಕೂಡಲೇ ಸರ್ಕಾರ ಈ ವಿಷಯವಾಗಿ ತೀರ್ಮಾನ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಮಾತ್ರವಲ್ಲದೇ, ಹಲವು ಬಾರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರಿಗೆ, ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಸಲ್ಲಿಸಿದ್ದೇವೆ. ಆದರೆ, ಸಮರ್ಪಕ ಉತ್ತರ ಮಾತ್ರ ದೊರೆಯುತ್ತಿಲ್ಲ ಎಂದು ಸಮಿತಿ ಅಧ್ಯಕ್ಷ ಇಬ್ರಾಹಿಂ ಗುಂಜಾವತಿ, ಸಂಘಟಕರಾದ ಇಬ್ರಾಹಿಂಸಾಬ ಸಿದ್ದಿ, ಇಮಾಮ ಕೆ. ಸಿದ್ದಿ, ಮೌಲಾಸಾಬ, ಉಮರ ಮತ್ತಿತರರು ತಿಳಿಸಿದ್ದಾರೆ.