ಕಾನೂನು ವಿವಿಯಲ್ಲಿ 22ರಿಂದ ರಾಷ್ಟ್ರೀಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 17
ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿವಿಯಲ್ಲಿ ಮೇ 22 ಹಾಗೂ 23ರಂದು ಪರಮಾಣು ಹೊಣೆಗಾರಿಕೆ, ವಿಮೆ ಹಾಗೂ ವಿವಾದ ಇತ್ಯರ್ಥ ಕುರಿತಾದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ವಿವಿಯ ಆಡಿಟೋರಿಯಂನಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಮೇ 22ರ ಬೆಳಗ್ಗೆ 10.30ಕ್ಕೆ ಭಾರತದ ಮಾಜಿ ಮುಖ್ಯನ್ಯಾಯಮೂರ್ತಿ ಎಸ್. ರಾಜೇಂದ್ರಬಾಬು ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವಿ ಕುಲಪತಿ ಡಾ. ಟಿ.ಆರ್. ಸುಬ್ರಹ್ಮಣ್ಯ ತಿಳಿಸಿದರು.
ಹೋಮಿಬಾಬಾ ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಹಾಗೂ ಬಿಎಆರ್ಸಿ ನಿರ್ದೇಶಕ ಆರ್.ಬಿ. ಗ್ರೋವರ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕಾನೂನು ವಿವಿ ಕುಲಪತಿ ಡಾ. ಟಿ.ಆರ್. ಅಧ್ಯಕ್ಷತೆ ವಹಿಸುವರು.
ಸಂಪನ್ಮೂಲ ವ್ಯಕ್ತಿಗಳಾಗಿ ಕೋಲ್ಕತ್ತಾದ ಎನ್ಯುಜೆಎಸ್ ಕುಲಪತಿ ಡಾ.ಪಿ. ಈಶ್ವರಭಟ್ಟ, ಮುಂಬಯಿಯ ಆಟೊಮಿಕ್ ಎನರ್ಜಿ ವಿಭಾಗದ ಕಾನೂನು ಸಲಹೆಗಾರ ಡಾ. ಜಿತೇಂದ್ರ ಕುಮಾರ, ಜಿಐಸಿ ಆಫ್ ಇಂಡಿಯಾದ ಉಪಪ್ರಧಾನ ವ್ಯವಸ್ಥಾಪಕ ವೈ. ರಾಮುಲು, ಎನ್ಯುಜೆಎಸ್ ಸಹ ಪ್ರಾಧ್ಯಾಪಕ ಡಾ. ಸಂದೀಪ್ಭಟ್ಟ, ಬೆಂಗಳೂರಿನ ಎನ್ಎಲ್ಎಸ್ಐಯು ಸಹ ಪ್ರಾಧ್ಯಾಪಕ ಡಾ. ಸಾಯಿರಾಮ ಭಟ್ಟ, ಎನ್ಯುಜೆಎಸ್ ಸಹಾಯಕ ಪ್ರಾಧ್ಯಾಪಕ ಡ್ಯಾನಿಯಲ್ ಮ್ಯಾಥು ಪಾಲ್ಗೊಂಡು ವಿವಿಧ ವಿಷಯಗಳ ಮೇಲೆ ಪ್ರಬಂಧ ಮಂಡಸಲಿದ್ದಾರೆ ಎಂದು ಸುಬ್ರಮಣ್ಯ ವಿವರಿಸಿದರು.
ಪರಮಾಣು ಕಾಯ್ದೆಯೂ: ಸದ್ಯ ಜಾರಿಯಲ್ಲಿರುವ ಕಾನೂನಿನಲ್ಲೇ ಪರಮಾಣು ಕಾಯ್ದೆಯೂ ಒಂದಾಗಿದೆ. ಪ್ರಸಕ್ತ ದಿನಮಾನಗಳಲ್ಲಿ ಪರಮಾಣು ಬಳಕೆ ಹಾಗೂ ಅಣು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ದೇಶ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿದ್ದು ಅಣು ಶಕ್ತಿ ಬಳಕೆಯ ಅನಿವಾರ್ಯತೆಯೂ ಹೆಚ್ಚಿದೆ ಎಂದರು. ಇಂತಹ ಚಟುವಟಿಕೆಗಳಿಂದ ಉಂಟಾಗುವ ಪರಿಣಾಮವೂ ಊಹಿಸಲು ಅಸಾಧ್ಯವಾಗಿದ್ದು, ಇದು ಅಣುಶಕ್ತಿ ಕ್ಷೇತ್ರದಲ್ಲಿ ಹಲವು ಸವಾಲು ಹಾಗೂ ಪ್ರಶ್ನೆ ಹುಟ್ಟು ಹಾಕಿದೆ. ಇದರಿಂದಾಗಿಯೇ, ಅಣು ವಿದ್ಯುತ್ ಉತ್ಪಾದನೆ ಹೇಗೆ, ಅಣು ಶಕ್ತಿ ಬಳಕೆ ವಿಧಾನ, ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳೇನು, ನಾಗರಿಕ ಸಮಾಜದ ಪಾತ್ರವೇನು, ಭದ್ರತೆ ಹೇಗೆ ಸೇರಿದಂತೆ ಮತ್ತಿತರ ಜಟಲಿ ಸವಾಲುಗಳನ್ನು ಚರ್ಚಿಸಲು ಈ ಸಮ್ಮೇಳನ ವೇದಿಕೆಯಾಗಿ ಪರಿಣಮಿಸಲಿದೆ ಎಂದೂ ಸುಬ್ರಮಣ್ಯ ಅಭಿಪ್ರಾಯಪಟ್ಟರು.
ಎರಡು ದಿನಗಳ ಈ ಸಮ್ಮೇಳನದಲ್ಲಿ ವಿಷಯ ತಜ್ಞರು, ಶೈಕ್ಷಣಿಕ ತಜ್ಞರು, ನ್ಯಾಯವಾದಿಗಳು, ಕಾನೂನು ಜನಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಮೇ 23ರಂದು ಸಂಜೆ 4.30ಕ್ಕೆ ನಡೆಯುವ ಮುಕ್ತಾಯ ಸಮಾರಂಭದಲ್ಲಿ ಅತಿಥಿಯಾಗಿ ಕೋಲ್ಕತ್ತಾದ ಡಬ್ಲ್ಯೂ.ಬಿ.ಎನ್ಯುಜೆಎಸ್ನ ಕುಲಪತಿ ಡಾ. ಈಶ್ವರಭಟ್ಟ ಪಾಲ್ಗೊಳ್ಳಲಿದ್ದಾರೆ ಎಂದರು. ಕುಲಸಚಿವ ಸುಭಾಸ ಮಾಳ್ಖೆಡೆ, ಮೌಲ್ಯಮಾಪನ ಕುಲಸಚಿವ ಡಾ. ಬಿ.ಎಸ್. ರೆಡ್ಡಿ, ಸಿಂಡಿಕೇಟ್ ಸದಸ್ಯ ಅನೂಪ ದೇಶಪಾಂಡೆ ಪತ್ರಿಕಾಗೋಷ್ಠಿಯಲ್ಲಿದ್ದರು.
ಹೊಸ ವಿಭಾಗ ಆರಂಭ: ಡಾ. ಟಿ.ಆರ್. ಸುಬ್ರಹ್ಮಣ್ಯ
ಪ್ರಸಕ್ತ ದಿನಮಾನದಲ್ಲಿ ನೀರು ನಿರ್ವಹಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಕಾನೂನು ತೊಡಕುಗಳು ಹೆಚ್ಚಾಗಿ ಕಂಡು ಬರಲಾರಂಭಿಸಿವೆ. ಇಂತಹ ಸಮಸ್ಯೆಗಳನ್ನು ಸಮರ್ಥ ರೀತಿ ನಿಭಾಹಿಸುವ ನುರಿತ ನ್ಯಾಯವಾದಿಗಳನ್ನು ಸಮಾಜಕ್ಕೆ ನೀಡಲು ಕರ್ನಾಟಕ ರಾಜ್ಯ ಕಾನೂನು ವಿವಿ ಉದ್ದೇಶಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿವಿಯ ಕುಲಪತಿ ಡಾ. ಟಿ.ಆರ್. ಸುಬ್ರಹ್ಮಣ್ಯ, ವಿವಿ ಆವರಣದಲ್ಲೇ ಪ್ರಸಕ್ತ ವರ್ಷದಿಂದ ಸೆಂಟರ್ ಫಾರ್ ಕಾನ್ಸ್ಟ್ಯೂಟುಷನಲ್ ಸ್ಟಡೀಸ್, ಸೆಂಟರ್ ಫಾರ್ ವಾಟರ್ ಮ್ಯಾನೇಜ್ಮೆಂಟ್ ಹಾಗೂ ಸೆಂಟರ್ ಫಾರ್ ಲ್ಯಾಡ್ ಮ್ಯಾನೇಜ್ಮೆಂಟ್ ಆರಂಭಿಸುವ ಗುರಿ ಹೊಂದಿದೆ ಎಂದರು. ಅಕ್ಯಾಡೆಮಿಕ್ ವರ್ಷದಲ್ಲಿ ಎಲ್ಎಲ್ಬಿ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾನ್ಸ್ಟ್ಯೂಟುಷನಲ್ ಲಾ ಹಾಗೂ ಇಂಟಿಲ್ಯಾಕ್ಚವಲ್ ಪ್ರಾರ್ಪಟಿ ರೈಟ್ಸ್ ಎಂಬ ಎರಡು ವಿಷಯಗಳನ್ನು ಐಚ್ಛಿಕವಾಗಿರಸಲಾಗುವುದೆಂದರು.
ಅತ್ಯಾಧುನಿಕ ಸೌಲಭ್ಯ: ವಿವಿಯಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕ್ಲಾಸ್ ರೂಮ್ಗಳಿವೆಯಲ್ಲದೆ, ಗ್ರಂಥಾಲಯದಲ್ಲಿ 15 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ದೊಡ್ಡ ಪ್ರಮಾಣದಲ್ಲಿ ಹಾಸ್ಟೆಲ್ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಶೀಫ್ರದಲ್ಲೇ ಇದು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದರು.