ಕುಡಿವ ನೀರಲ್ಲಿ ಚರಂಡಿ ನೀರು!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 17
ಹುಬ್ಬಳ್ಳಿಯ ನವೀನ್ ಪಾರ್ಕ್ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್ಲೈನ್ಗೆ ಚರಂಡಿ ನೀರು ಮಿಶ್ರಣಗೊಂಡ ಪರಿಣಾಮ ಅಲ್ಲಿನ ನಿವಾಸಿಗಳು ಚರಂಡಿ ನೀರು ಮಿಶ್ರಿತ ನೀರನ್ನು ಪಡೆಯುವಂತಾಗಿದೆ.
ಕರ್ನಾಟಕ ಜಲ ಮಂಡಳಿ ಹಾಕಿದ್ದ ಕುಡಿಯುವ ನೀರಿನ ಪೈಪ್ಲೈನ್ಗೆ ಚರಂಡಿ ನೀರು ಹೋಗಬೇಕಿದ್ದ ಪೈಪ್ ಸಂಪರ್ಕಗೊಂಡ ಪರಿಣಾಮ ಇಡೀ ಪ್ರದೇಶದಲ್ಲಿ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರಿಕೊಳ್ಳುತ್ತಿದೆ.
ಒಂದು ವೇಳೆ ಶುದ್ಧ ನೀರು ಪೂರೈಕೆಯಾದರೂ ಆ ನೀರಿಗೂ ಚರಂಡಿ ನೀರಿನ ವಾಸನೆ ಇದ್ದು, ನಾಗರಿಕರು ಕುಡಿಯಲು ಬಾರದಂತಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ನಗರದಾದ್ಯಂತ ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಆಮೆ ಗತಿಯಲ್ಲಿ ಸಾಗುತ್ತಿವೆ.
ರಸ್ತೆಗಳು ಹಾಳಾಗುವುದರ ಜೊತೆಗೆ ಕುಡಿಯುವ ನೀರು ಪೂರೈಕೆಗೆ ಮೀಸಲಾಗಿರುವ ಪೈಪ್ಲೈನ್ಗಳಿಗೆ ಗಲೀಜು ನೀರು ಹೋಗುವ ಪೈಪ್ಲೈನ್ ಸಂಪರ್ಕಿಸುವ ಮುಖಾಂತರ ಹೊಸ ಅದ್ವಾನಗಳನ್ನು ಹುಟ್ಟು ಹಾಕಿದಂತಾಗಿದೆ.