ಧಾರವಾಡ: ಏರುತ್ತಿರುವ ಅತ್ಯಾಚಾರ ಪ್ರಕರಣ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 17
ಧಾರವಾಡದಲ್ಲಿ ಇತ್ತೀಚೆಗೆ ಅತ್ಯಾಚಾರ, ಮಕ್ಕಳು-ಮಹಿಳೆಯರ ಅಪಹರಣದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೂರು ದಿನಗಳ ಹಿಂದೆ ಬಯಲಿಗೆ ಬಂದ ತಾಲೂಕಿನ ಬೇಲೂರಿನ ಬಾಲಕಿ ಮೇಲಿನ ನಿರಂತರ ಅತ್ಯಾಚಾರ ಪ್ರಕರಣವಂತೂ ಇಲ್ಲಿನ ಮಂದಿಗೆ ನಿದ್ದೆಗೆಡಿಸಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತುಪಡಿಸಿ ಜಿಲ್ಲೆಯಲ್ಲಿ ಹತ್ತು ವರ್ಷಗಳಲ್ಲಿ ಬರೋಬ್ಬರಿ 60 ಅತ್ಯಾಚಾರ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಕುಟುಂಬದ ಮರ್ಯಾದೆಗೆ ಅಂಜಿ ಅನೇಕ ಅತ್ಯಾಚಾರದ ಪ್ರಕರಣಗಳು ಮುಚ್ಚಿ ಹೋಗಿದ್ದು, ಆ ಅಂಕಿ-ಸಂಖ್ಯೆ ಸೇರ್ಪಡೆ ಮಾಡಿದರೆ ಅತ್ಯಾಚಾರದ ಸಂಖ್ಯೆ 100ರ ಗಡಿ ತಲುಪಿದರೂ ಆಶ್ಚರ್ಯವೇನಿಲ್ಲ.
ಅತ್ಯಾಚಾರ ಬಾಲಕಿಯರ ಮೇಲೆ ಜಾಸ್ತಿ...
ಸೋಜಿಗದ ಸಂಗತಿ ಏನೆಂದರೆ, 2013ರ ಜನವರಿಯಿಂದ ಮೇ 14ರ ವರೆಗೆ ಏಳು ಅತ್ಯಾಚಾರ ಪ್ರಕರಣ ನಡೆದಿವೆ. ಈ ಪೈಕಿ ಆರು ಬಾಲಕಿಯರ ಮೇಲೆ ನಡೆದರೆ, ಒಂದು ಪ್ರಕರಣ 20 ವಯಸ್ಸಿನ ಯುವತಿ ಮೇಲೆ ನಡೆದಿದೆ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಅಂಕಿ-ಅಂಶಗಳಿಂದ ಗೊತ್ತಾಗುತ್ತದೆ.
ಕಳೆದ ವರ್ಷದ ಡಿಸೆಂಬರ್ ಅಂತ್ಯದಲ್ಲಿ ದೆಹಲಿಯಲ್ಲಿ ನಡೆದ ಯುವತಿಯೊಬ್ಬಳ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಎಲ್ಲರ ಬಾಯಲ್ಲಿ ಈ ಸುದ್ದಿಯೇ ಹರಿದಾಡುತ್ತಿರುವಾಗ 2013ರ ಹೊಸ ವರ್ಷದ ಆರಂಭದ 5ನೇ ದಿನವೇ ತಾಲೂಕಿನ ಅಮ್ಮಿನಬಾವಿ ಗ್ರಾಮದ 9 ವರ್ಷದ ಬಾಲಕಿ ಮೇಲೆ ಸಮೀಪದ ಶಿಬಾರಗಟ್ಟಿ ಗ್ರಾಮದ ಶಿವಪ್ಪ ಮಾದರ ಎಂಬಾತ ಅತ್ಯಾಚಾರ ಎಸಗಿದ. ಈ ಕೆಟ್ಟ ಸುದ್ದಿಯನ್ನು ಅರಗಿಸಿಕೊಳ್ಳುವಷ್ಟರಲ್ಲಿಯೇ ಎಂಟೇ ದಿನಗಳಲ್ಲಿ ಅಂದರೆ, ಜನವರಿ 13ರಂದು ತಾಲೂಕಿನ ಹಿರೇಮಲ್ಲಿಗವಾಡದಲ್ಲಿ 13 ವರ್ಷದ ಬಾಲಕಿ ಮೇಲೆ ಆಕೆಯ ಚಿಕ್ಕಪ್ಪ ಶಿವಪ್ಪ ಕಲ್ಲೂರ ಹೊಲದಲ್ಲಿ ಅತ್ಯಾಚಾರ ನಡೆಸಿ ಕ್ರೂರಿಗಳ ಪಟ್ಟಿಯಲ್ಲಿ ಸೇರಿದ.
ಹೀಗೆ ಅತ್ಯಾಚಾರದ ಪಟ್ಟಿ ಶುರುವಾಯ್ತು. ಫೆಬ್ರುವರಿ 1ರಂದು ಕುಂದಗೋಳದ ಸಂಶಿಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಯಿತು. ಮಾರ್ಚ್ 1ರಂದು ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ 20 ವರ್ಷದ ಯುವತಿಯನ್ನು ಅಪಹರಿಸಿ ಹಜರತಅಲಿ ಖಾಸೀಮಸಾಬ ಮೀರಾನವರ ಎಂಬಾತ ಮಾನಭಂಗ ಮಾಡಿದ. ಏಪ್ರಿಲ್ 4ರಂದು ನವಲಗುಂದ ತಾಲೂಕಿನ ಅಣ್ಣಿಗೇರಿ ಸುಲಭ ಶೌಚಾಲಯದಲ್ಲಿ 16 ವಯಸ್ಸಿನ ಬಾಲಕಿ ಅಲ್ಲಾಭಕ್ಷ ಇಟಗಿ ಎಂಬಾತನಿಂದ ಅತ್ಯಾಚಾರಕ್ಕೊಳಗಾದಳು. ಹಾಗೆಯೇ, ಧಾರವಾಡ ತಾಲೂಕಿನ ಬೇಲೂರಿನಲ್ಲಿ ಒಡಿಸಾದ 14 ವಯಸ್ಸಿನ ಬಾಲಕಿ ಮೇಲೆ ಏಳೆಂಟು ತಿಂಗಳಿಂದ ಹನುಮಂತ ಮಾದರ ಎಂಬಾತ ನಿರಂತರವಾಗಿ ಅತ್ಯಾಚಾರ ನಡೆಸಿ ಆಕೆಯು ಗರ್ಭಧರಿಸಲು ಕಾರಣನಾದ. ಈ ಪ್ರಕರಣ ಮೇ 14ರಂದು ತಡವಾಗಿ ಬೆಳಕಿಗೆ ಬಂದಿದೆ. ಇವು ಬರೀ ಐದು ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು.
ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷ ಎಷ್ಟು?
ಇದೇ ರೀತಿ 2012ರ ಜನವರಿಯಲ್ಲಿ ಧಾರವಾಡ ತಾಲೂಕಿನ ಗೋವನಕೊಪ್ಪದಲ್ಲಿ 17 ವಯಸ್ಸಿನ ಯುವತಿ ಮೇಲೆ, ಜನವರಿ 11ರಂದು ಹುಬ್ಬಳ್ಳಿ ಗ್ರಾಮೀಣ ಭಾಗದ ಉಮಚಗಿ ಬಸ್ ನಿಲ್ದಾಣದಿಂದ 17 ವಯಸ್ಸಿನ ಬಾಲಕಿ ಅಪಹರಿಸಿ ಅತ್ಯಾಚಾರ, ಫೆಬ್ರವರಿ 13ರಂದು ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ 13 ವಯಸ್ಸಿನ ಬಾಲಕಿಯನ್ನು ಐವರು ಅಪಹರಿಸಿ ಅತ್ಯಾಚಾರ ಮಾಡಿದ್ದು, ಏಪ್ರಿಲ್ 14ರಂದು ಕುಂದಗೋಳ ತಾಲೂಕಿನ ಕುಬಿಹಾಳ-ದೇವಿಕೊಪ್ಪ ಗ್ರಾಮಗಳ ಮಧ್ಯೆ 16 ವಯಸ್ಸಿನ ಬಾಲಕಿ ಮೇಲೆ, ಜುಲೈ 18ರಂದು ಧಾರವಾಡ ಗ್ರಾಮೀಣ ಭಾಗದ ಹೊಸ ತೇಗೂರಿನಲ್ಲಿ 26 ವಯಸ್ಸಿನ ಮಹಿಳೆಯ ಮೇಲೆ, ಡಿಸೆಂಬರ್ 10ರಂದು ಕುಂದಗೋಳ ತಾಲೂಕಿನ ರೇಲ್ವೆ ನಿಲ್ದಾಣದ ಬಳಿ ಲಾಡ್ಜ್ನಲ್ಲಿ 27 ವಯಸ್ಸಿನ ಯುವತಿ ಮೇಲೆ ಹಾಗೂ ಡಿಸೆಂಬರ್ 18ರಂದು ನವಲಗುಂದ ಹಾಳಕುಸುಗಲ್ ಗ್ರಾಮದಲ್ಲಿ 18 ವಯಸ್ಸಿನ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಇಲ್ಲಿ ಸ್ಮರಿಸಬಹುದು.
ಧಾರವಾಡ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅತ್ಯಾಚಾರದ ಪ್ರಕರಣಗಳು ಹೆಚ್ಚೆಚ್ಚು ದಾಖಲಾಗುತ್ತಿದ್ದು, ಅಂಕಿ -ಅಂಶ ಗಮನಿಸಿದರೆ ಅಪ್ರಾಪ್ತ ಬಾಲಕಿಯರ ಮೇಲೆಯೇ ಅತ್ಯಾಚಾರ ಆಗಿರುವುದು ಗೊತ್ತಾಗುತ್ತದೆ. ಪೊಲೀಸ್ ಇಲಾಖೆ ಸಹ ಈ ಎಲ್ಲ ಪ್ರಕರಣಗಳಲ್ಲಿನ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಅವರಿಗೆ ತಕ್ಷ ಶಿಕ್ಷೆ ಕೊಡಿಸಿದೆ. ಆದರೂ ಸಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವುದು ಸೋಜಿಗದ ಸಂಗತಿ.
ಬಸವರಾಜ ಹಿರೇಮಠ