ಬಸವಣ್ಣನ ಸಿದ್ಧಾಂತ ಬಿಟ್ಟರೆ ಬದುಕಿಲ್ಲ: ಶ್ರೀನಿವಾಸ ವಾಡಪ್ಪಿ
ಧಾರವಾಡ: 12ನೇ ಶತಮಾನದ ಶರಣರ ಸಾಮಾಜಿಕ ಕ್ರಾಂತಿಗಳು ಮನುಷ್ಯ ಮನುಷ್ಯರಲ್ಲಿನ ಭೇದ ಭಾವ ಹೋಗಲಾಡಿಸಿ ಆದರ್ಶ ಬದುಕು ಕಟ್ಟಿಕೊಟ್ಟಿತ್ತು. ಅವರ ಆದರ್ಶ ಬದುಕಿನ ವಿಚಾರ ಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು. ಇಲ್ಲಿನ ಅಕ್ಕನಬಳಗದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಿದ್ಧಾಂತ ಬಿಟ್ಟರೆ ನಮಗೆ ಬದುಕಿಲ್ಲ. ಈ ಸಿದ್ಧಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಕ್ಕನ ಬಳಗದ ಅಧ್ಯಕ್ಷೆ ಪ್ರಭಾವತಿ ಮೂರಶಿಳ್ಳಿ ಮಾತನಾಡಿ, ಬಸವಣ್ಣನವರ ತತ್ವ, ಸಿದ್ಧಾಂತಗಳು ಜಾರಿಯಲ್ಲಿದ್ದರೆ, ಮಾದರಿ ಸಮಾಜ ನಿರ್ಮಾಣವಾಗುತ್ತಿತ್ತು. ಅವರ ಚಿಂತನೆಗಳು ಕೇವಲ ಒಂದು ಪಂಗಡದಲ್ಲಿ ಮಾತ್ರ ಉಳಿದಿವೆ. ಬಸವಣ್ಣನವರು ಸಮಾಜಕ್ಕೆ ನೀಡಿದ ಕೊಡುಗೆಗಳ ಕುರಿತು ಚಿಂತಿಸಬೇಕಾಗಿದೆ ಎಂದರು. ಶಾರದಾ ಬೆಲ್ಲದ, ಮೀನಾಕ್ಷಿ ಕೋಟೂರ, ಗೌರಮ್ಮಾ ನ್ಯಾಮತಿ, ನಳಿನಾಕ್ಷಿ ಅರಳಗುಪ್ಪಿ, ಕಲ್ಪನಾ ಕಟಗಿ ಇದ್ದರು. ಡಾ. ಪಾರ್ವತಿ ಹಾಲಭಾವಿ ಪರಿಚಯಿಸಿದರು. ಪ್ರೇಮಾ ಹಲಕಿ ನಿರೂಪಿಸಿದರು. ಸುಜಾತಾ ಕುಂದಗೋಳ ವಂದಿಸಿದರು.