ಪಾಲಿಕೆ ಸಿಬ್ಬಂದಿ ಕೊರತೆಗೆ ಮುಕ್ತಿ ಸಿಕ್ಕೀತೇ?
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 18
ಸಿಬ್ಬಂದಿ ಕೊರತೆಯಿಂದ ನಲುಗುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದಲಾದರೂ ಮುಕ್ತಿ ಸಿಕ್ಕಿತ್ತೇ..?
ರಾಜ್ಯದ ಎರಡನೇ ರಾಜಧಾನಿ ಖ್ಯಾತಿಯ ಮಹಾನಗರ ಪಾಲಿಕೆ, ಅವಳಿನಗರದ ಜನತೆಯ ಬೇಡಿಕೆಗಳಿಗೆ ಸ್ಪಂದಿಸಬೇಕೆಂಬ ಸುದುದ್ದೇಶ ಹೊಂದಿದೆಯಾದರೂ ಸಿಬ್ಬಂದಿ ಕೊರತೆಯಿಂದಾಗಿ ಬಹಳಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದೆ, ಜನರ ಆಕ್ರೋಶಕ್ಕೆ ಕಾರಣವಾಗುವಂತಾಗಿದೆ.
ಎ ದರ್ಜೆ ಅಧಿಕಾರಿಯಿಂದ ಹಿಡಿದು ಪೌರ ಕಾರ್ಮಿಕರವರೆಗೂ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಪಾಲಿಕೆ, ತಾತ್ಕಾಲಿಕವಾಗಿ ಕೆಲವಷ್ಟು ಅಧಿಕಾರಿ ಸೇರಿದಂತೆ ಪೌರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಆಡಳಿತ ಯಂತ್ರವನ್ನು ವ್ಯವಸ್ಥಿತ ರೀತಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿದೆಯಾದರೂ ಶ್ರೀಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಜನಪ್ರತಿನಿಧಿಗಳಿಂದ ಹಿಡಿದು ಅಧಿಕಾರಿಗಳಲ್ಲಿಯೂ ಇರುವುದು ಮಾತ್ರ ಕಟು ವಾಸ್ತವ.
ಕೊರತೆ ಕೋಷ್ಠಕ: ಪಾಲಿಕೆಯಲ್ಲಿ 'ಎ' ದರ್ಜೆ ಅಧಿಕಾರಿಯಿಂದ ಹಿಡಿದು 'ಡಿ' ದರ್ಜೆ ನೌಕರರವರೆಗೆ ಇರುವ ಕೊರತೆಯ ಸಂಕ್ಷಿಪ್ತ ಮಾಹಿತಿ ಇಂತಿದೆ. 'ಎ' ದರ್ಜೆಯಲ್ಲಿ 10-12 ಅಧಿಕಾರಿಗಳ ಕೊರತೆ ಇದ್ದರೆ, ' ಬಿ' ದರ್ಜೆಯಲ್ಲಿ 45ಕ್ಕೂ ಹೆಚ್ಚು, 'ಸಿ' ದರ್ಜೆಯಲ್ಲಿ 509 ಹಾಗೂ 'ಡಿ' ದರ್ಜೆಯಲ್ಲಿ 1400ಕ್ಕೂ ಹೆಚ್ಚು ಹುದ್ದೆಗಳ ಖಾಲಿಯಿದ್ದು, ಜನಸಾಮಾನ್ಯರ ತುರ್ತು ಕೆಲಸ ಕಾರ್ಯಗಳನ್ನು ಈಡೇರಿಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ.
ಇನ್ನೊಂದು ವಿಚಿತ್ರ ಸಂಗತಿ ಎಂದರೆ, ಸದ್ಯ ಬಿ ಮತ್ತು ಸಿ ದರ್ಜೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳೆಲ್ಲರೂ ಬಡ್ತಿ ಪಡೆದುಕೊಂಡವರಾಗಿದ್ದಾರೆ. ಎಂಜಿನಿಯರಿಂಗ್ ವಿಭಾಗದಲ್ಲಿ ಜ್ಯೂನಿಯರ್ ಅಭಿಯಂತರಾಗಿ ಸೇವೆ ಸಲ್ಲಿಸುತ್ತಿರುವ ಬಹುತೇಕರಿಗೆ ತಾವು ನಿರ್ವಹಿಸುತ್ತಿರುವ ವಿಭಾಗದ ಕೆಲಸ ಕಾರ್ಯಗಳ ಬಗ್ಗೆ ಎಳ್ಳಷ್ಟು ತಿಳಿದಿಲ್ಲ ಎಂಬ ಆರೋಪವೂ ಇದೆ. ಇದೇ ಕಾರಣಕ್ಕಾಗಿಯೇ ಹಿಂದಿನ ಆಯುಕ್ತ ಪಿ. ಮಣಿವಣ್ಣನ್, ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಲು ನುರಿತರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದರು ಎಂಬುದು ಗಮನಾರ್ಹ.
ಎರಡೂವರೆ ಸಾವಿರ!: ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ, ಪಾಲಿಕೆಗೆ 2500 ಸಿಬ್ಬಂದಿ ಭರ್ತಿಗೆ ಮಂಜೂರಾತಿ ನೀಡಿದೆ. ಆದರೆ, ಸದ್ಯ ಪಾಲಿಕೆಯಲ್ಲಿ 'ಎ' ದರ್ಜೆ ಅಧಿಕಾರಿಗಳಿಂದ ಹಿಡಿದು 'ಡಿ' ದರ್ಜೆ ಅಧಿಕಾರಿಗಳವರೆಗೆ ಇರುವುದು ಬರೋಬರಿ 1,500ರ ಆಸುಪಾಸು!
ಅಂದರೆ, ಸರ್ಕಾರ ನಿಗದಿಪಡಿಸಿದ ಹುದ್ದೆಗಳನ್ನೇ ಗಣನೆಗೆ ತೆಗೆದುಕೊಂಡರೂ ಇನ್ನೂ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೊರತೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಲ್ಲಿ ಇನ್ನೊಂದು ವಿಶೇಷ ಸಂಗತಿ ಎಂದರೆ, ಕರ್ತವ್ಯ ನಿರ್ವಹಿಸುತ್ತಿರುವ 1,500 ಸಿಬ್ಬಂದಿಯಲ್ಲಿ ಪೌರ ಕಾರ್ಮಿಕರು ಸೇರಿದಂತೆ ಡಾಟಾ ಎಂಟ್ರಿ ವಿಭಾಗದಲ್ಲಿರುವವರೆಲ್ಲರೂ ಗುತ್ತಿಗೆ ಆಧಾರಿತ ನೌಕರರು.
ಹೊಸ ನೇಮಕಾತಿಯಿಲ್ಲ: ಪಾಲಿಕೆಗೆ 1976ರಿಂದ ಈ ವರೆಗೂ ಹೊಸ ನೇಮಕಾತಿಯೇ ಆಗಿಲ್ಲ. ರಾಜ್ಯದ ದೊಡ್ಡ ಮಹಾನಗರ ಪಾಲಿಕೆಗಳ ಸಾಲಿನಲ್ಲಿ ಬರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ತೆರಿಗೆ ವಸೂಲಿಯಲ್ಲಿಯೂ ಪ್ರತಿಬಾರಿಯೂ ಗಮನಾರ್ಹ ಸಾಧನೆ ತೋರುತ್ತಲೇ ಬಂದಿದೆ.
ಇತ್ತೀಚಿನ ದಿನಗಳಲ್ಲಂತೂ, ಪಾಲಿಕೆ ಆದಾಯ ಹೆಚ್ಚಿಸಿಕೊಳ್ಳಲು ಅನೇಕ ರೀತಿಯ ಕಾನೂನುಗಳನ್ನು ಜಾರಿಗೆ ತರುತ್ತಲೇ ಸಾಗಿದೆ. ಇದ್ಯಾವುದಕ್ಕೂ ಮಹಾನಗರದ ಜನತೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸದೆ ಸಹಕಾರ ನೀಡುತ್ತಸಾಗಿದ್ದಾರೆ. ಆದರೆ, ಪಾಲಿಕೆ ಮಾತ್ರ ಜನಸಾಮಾನ್ಯರ ಬೇಕು ಬೇಡಿಕೆಗಳಿಗೆ ತಕ್ಷಣಕ್ಕೆ ಸ್ಪಂದಿಸುವಲ್ಲಿ ಸಿಬ್ಬಂದಿ ಕೊರತೆಯಿಂದ ವಿಫಲವಾಗುತ್ತಲೇ ಸಾಗಿದೆ. ಇದು ಪಾಲಿಕೆಯಲ್ಲಿರುವ ಪ್ರಾಮಾಣಿಕ ಅಧಿಕಾರಿಗಳ 'ದಕ್ಷತೆ'ಯ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ.
ಅನುಕಂಪದ ಅಲೆ: ಪಾಲಿಕೆಯಲ್ಲಿ ನಿವೃತ್ತಿ ಹಾಗೂ ಮತ್ತಿತರ ಕಾರಣಗಳಿಂದಾಗಿ ಖಾಲಿಯಾದ ಸ್ಥಾನಗಳನ್ನು 'ಅನುಕಂಪ' ಆಧಾರಿತರಿಂದಲೇ ತುಂಬಲಾಗಿದೆ. ಇದು ಸಾಕಷ್ಟು ಪ್ರತಿಭೆ ಹೊಂದಿರುವ ಹಾಗೂ ಪಾಲಿಕೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವವರ ಆಸೆಗೆ ತಣ್ಣೀರೆರಚಿದಂತೆ ಮಾಡಿದೆ. ಪಾಲಿಕೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸುವಲ್ಲಿ ಈವರೆಗಿನ ಸರ್ಕಾರಗಳು ತೋರಿರುವ ನಿರ್ಲಕ್ಷ್ಯತನದಿಂದಾಗಿ ಪಾಲಿಕೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕೆಲವೇ ಕೆಲವು ಜನರ ಪಾಲಾದಂತಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಾದರೂ ಮಹಾನಗರ ಪಾಲಿಕೆ ಸಿಬ್ಬಂದಿ ಕೊರತೆ ಸಮಸ್ಯೆ ಬಗೆಹರಿಯುವುದೇ ಎಂದು ಅವಳಿನಗರದ ಜನತೆ ಎದುರು ನೋಡುವಂತಾಗಿದೆ.
-ಬಿ.ಕೆ. ಮಹೇಂದ್ರ