ಬರಗಾಲದಲ್ಲೂ ಹುಲಿಗೆಮ್ಮ ದೇವಿ ದೇವಸ್ಥಾನ ಆದಾಯ ರು. 5 ಕೋಟಿ
ಕೊಪ್ಪಳ: ತಾಲೂಕಿನ ಹುಲಿಗೆಮ್ಮ ದೇವಸ್ಥಾನದ ವಾರ್ಷಿಕ ಆದಾಯ ಬರೋಬ್ಬರಿ ರು. 5.08 ಕೋಟಿ. ಸತತ ಎರಡು ವರ್ಷಗಳಿಂದ ಕಾಡುತ್ತಿರುವ ಬರದ ನಡುವೆಯೂ ಆದಾಯದಲ್ಲಿ ಹೆಚ್ಚಳವಾಗಿರುವುದು ವಿಶೇಷ.
ಜಾತ್ರೆ ನಿಮಿತ್ತ ಶನಿವಾರ ಹುಂಡಿಯನ್ನು ಒಡೆಯಲಾಗಿತ್ತು. ಅಚ್ಚರಿ ಎಂದರೆ ಕೇವಲ 2 ತಿಂಗಳ 9 ದಿನಕ್ಕೆ ಭರ್ತಿಯಾಗಿದ್ದ ಹುಂಡಿಯನ್ನು ತೆರೆದಾಗ ರು. 31 ಲಕ್ಷ, 195 ಗ್ರಾಮ ಚಿನ್ನ, 5.5 ಕೆಜಿ ಬೆಳ್ಳಿ ಸಂಗ್ರಹವಾಗಿರುವುದು ಗೊತ್ತಾಗಿದೆ. ಇದು ದೇವಸ್ಥಾನದ ಇತಿಹಾಸದಲ್ಲಿಯೇ ಅತ್ಯಧಿಕ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಮೇಶ ವೈದ್ಯ ಹೇಳಿದ್ದಾರೆ.
ದಿನವಿಡೀ ಎಣಿಸಿ, ಬೇರ್ಪಡಿಸಿ ಸಂಜೆ ವೇಳೆ ಲೆಕ್ಕ ಹಾಕಿದಾಗ ದೇವಸ್ಥಾನ ಆವರಣದಲ್ಲಿ ಅಚ್ಚರಿ ವಾತಾವರಣ ನಿರ್ಮಾಣವಾಗಿತ್ತು. ಈ ಸಾರಿ ಬರ ಇರುವುದರಿಂದ ಅಷ್ಟಾಗಿ ಸಂಗ್ರಹವಾಗಲ್ಲ ಎಂಬ ದೇವಸ್ಥಾನ ಸಮಿತಿ ಸದಸ್ಯರ ಮಾತು ಹುಸಿಯಾಗಿ, ಭಕ್ತರು ಈಗಲೂ ಕಾಣಿಕೆ ನೀಡುವಲ್ಲಿ ಮುಂದೆ ಎನ್ನುವುದನ್ನು ತೋರಿಸಿದರು. ಇದು ಸುತ್ತಮುತ್ತಲ ದೇವಸ್ಥಾನಗಳಲ್ಲಿಯೇ ಅತ್ಯಧಿಕ ಎನ್ನುವುದು ಗಮನಾರ್ಹ ಸಂಗತಿ.
ರು. 5.08 ಕೋಟಿ: ದೇವಸ್ಥಾನ ಸಮಿತಿ ವಾರ್ಷಿಕವಾಗಿ ಬಂದಿರುವ ಆದಾಯವನ್ನು ಲೆಕ್ಕ ಹಾಕಿದ್ದು, ಈ ಸಾರಿ ರು. 5.08 ಕೋಟಿ ಆಗಿದೆ. ಕಳೆದ ಸಾರಿಗೆ ಹೋಲಿಸಿದರೆ ರು. 8 ಲಕ್ಷ ಅಧಿಕವಾಗಿದೆ ಎನ್ನಲಾಗಿದೆ. ಹುಂಡಿಯಿಂದ ಬಂದಿರುವ ರು. 1.30 ಕೋಟಿ, ಆರತಿ ತಟ್ಟೆ ಸೇರಿದಂತೆ ನಾನಾ ಮೂಲಗಳಿಂದ ಬಂದಿರುವುದನ್ನೆಲ್ಲ ಲೆಕ್ಕ ಹಾಕಿದರೇ ಬರೋಬ್ಬರಿ ರು. 5.08 ಕೋಟಿ ಆದಾಯ ಬಂದಿರುವುದು ಆಡಳಿತ ಮಂಡಳಿ ಸಂತಸಕ್ಕೆ ಕಾರಣವಾಗಿದೆ.
ಹಲವಾರು ಯೋಜನೆಗಳು: ಭಕ್ತರು ನೀಡುವ ಕಾಣಿಕೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿರುವುದರಿಂದ ಇನ್ನಷ್ಟು ಸೌಲಭ್ಯಗಳನ್ನು ನೀಡಲು ದೇವಸ್ಥಾನ ಸಮಿತಿ ಮುಂದಾಗಿದೆ ಎಂದು ಆಡಳಿತಾಧಿಕಾರಿ ಚಂದ್ರಮೌಳಿ ತಿಳಿಸಿದ್ದಾರೆ. ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಅವರು, ಇನ್ನು ದೇವಸ್ಥಾನದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವ ಮೂಲಕ ಇನ್ನಷ್ಟು ಪಾರದರ್ಶಕತೆ ಹಾಗೂ ಶಿಸ್ತು ಕಾಪಾಡಲಾಗುವುದು. ಬರುವ ಭಕ್ತರಿಗೆ ದೇವರ ದರ್ಶನಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ದೇವಸ್ಥಾನದ ಆವರಣದಲ್ಲಿ ಕಾಯಿ ಒಡೆಯುವುದಕ್ಕೆ ನಿಗದಿ ಮಾಡಿದ್ದ ದರವನ್ನು ತೆಗೆದು ಹಾಕಲಾಗಿದ್ದು, ಸಂಪೂರ್ಣ ಉಚಿತ ಮಾಡಲಾಗಿದೆ. ಅಲ್ಲದೆ ಭಕ್ತರೇ ಇನ್ನು ಮುಂದೆ ತಾವೇ ಕಾಯಿ ಒಡೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಈ ಮೂಲಕ ಕಾಯಿ ಒಡೆಯುವುದಕ್ಕಾಗಿ ಮಾಡುತ್ತಿದ್ದ ಸುಲಿಗೆಯನ್ನು ತಡೆಗಟ್ಟುವ ವಿಚಾರವೂ ಇದರಲ್ಲಿ ಅಡಗಿದೆ ಎಂದರು.
ನಿತ್ಯವೂ ಪ್ರಸಾದ: ಇನ್ನು ಮುಂದೆ ದೇವಸ್ಥಾನದಲ್ಲಿ ನಿತ್ಯವೂ ಪ್ರಸಾದ ನೀಡುವ ವ್ಯವಸ್ಥೆಯನ್ನು ಜಾರಿ ಮಾಡಲು ಸಮಿತಿ ನಿರ್ಧಾರ ಮಾಡಿದ್ದು, ಶೀಘ್ರದಲ್ಲಿಯೇ ಜಾರಿ ಮಾಡಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಪ್ರಸಾದ ವಿತರಣೆ ಸಾಂಗವಾಗಿ ನಡೆಯುತ್ತದೆ. ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
ಆರತಿ ತಟ್ಟೆ ಹರಾಜು ಇಲ್ಲ: ಇನ್ನು ಮುಂದೆ ದೇವಸ್ಥಾನದಲ್ಲಿ ಆರತಿ ತಟ್ಟೆಯನ್ನು ಹರಾಜು ಮಾಡುವುದಿಲ್ಲ. ಇದುವರೆಗೂ ಲಕ್ಷಾಂತರ ರುಪಾಯಿಗೆ ಹರಾಜು ಮಾಡುತ್ತಿದ್ದ ಆರತಿ ತಟ್ಟೆಯಿಂದ ಅಪಾರ ಲಾಭವನ್ನು ಗಳಿಸಿಕೊಳ್ಳುತ್ತಿದ್ದರು. ಇದು ದೇವಸ್ಥಾನಕ್ಕೆ ಬರಲಿ ಎಂದು ಸಿಸಿ ಕ್ಯಾಮೆರಾ ಅಳವಡಿಸಿ, ಆರತಿ ತಟ್ಟೆಗೆ ಬರುವ ಹಣ, ಬಂಗಾರ ಸೇರಿ ಎಲ್ಲವನ್ನು ದೇವಸ್ಥಾನಕ್ಕೆ ನೇರವಾಗಿ ತೆಗೆದುಕೊಳ್ಳಲಾಗುವುದು ಎಂದರು.