ಇಂದು ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆ
ಧಾರವಾಡ: ಶತಮಾನದ ಶಕಪುರುಷ, ಪ್ರಾತಃಸ್ಮರಣೀಯ, ಜ್ಞಾನದಖಣಿ, ಮಾಧ್ವ ಮುಕುಟ ಶ್ರೀ ವಿದ್ಯಾಮಾನ್ಯತೀರ್ಥರು ತಮ್ಮ ತಪೋಬಲ, ಅನುಷ್ಠಾನ, ಪಾಠ, ಪ್ರವಚನ, ವಾಕ್ಯಾರ್ಥಗಳ ಮೂಲಕ ಬರೀ ಶ್ರೀ ಪಲಿಮಾರು, ಶ್ರೀ ಭಂಡಾರಕೇರಿ ಮಠಕ್ಕಷ್ಟೇ ಸೀಮಿತರಾಗದೇ ದೇಶಾದ್ಯಂತ ಸಂಚರಿಸಿ ಮಾಧ್ವ ಮತಕ್ಕೆ, ಯತಿ ಪರಂಪರೆಗೆ ಒಂದು ಹೊಸ ಹೊಳಪನ್ನೇ ನೀಡಿದವರು.
ಶ್ರೀ ಸತ್ಯಧ್ಯಾನತೀರ್ಥರು ತಮ್ಮ ಪಾಠ, ಪ್ರವಚನ, ಬರಹಗಳ ಮೂಲಕ, ಹತ್ತಾರು ಯತಿಗಳಿಗೆ, ನೂರಾರು ಪಂಡಿತರಿಗೆ ಪಾಠ ಹೇಳುತ್ತಾ, ಮಧ್ವಶಾಸ್ತ್ರದ ಸತ್ವವನ್ನು, ಅದರ ವೈಭವವನ್ನು ಸಾರಿ-ಸಾರಿ ಹೇಳಿದರೆ, ಅವರ ಶಿಷ್ಯರಾಗಿದ್ದ ಶ್ರೀ ವಿದ್ಯಾಮಾನ್ಯತೀರ್ಥರೂ ಅದೇ ತೆರನಾದ ಕಾರ್ಯಗಳಿಂದ ಬಾಳಿ ಬೆಳಗಿದರು ಎಂದು ಅನೇಕ ವಿದ್ವಾಂಸರು ದಾಖಲಿಸಿದ್ದಾರೆ. ಈ ವರ್ಷ ವಿದ್ಯಾಮಾನ್ಯರ ಶತಮಾನೋತ್ಸವವೂ ಹೌದು. ಧಾರ್ಮಿಕ ಶಿಬಿರ, ಪಾಠ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಗೋಷ್ಠಿಗಳ ಜೊತೆಯಲ್ಲಿ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನೆಯನ್ನು ಮೇ 20ರಿಂದ 23ರ ವರೆಗೆ ಧಾರವಾಡದ ಕಲಗೇರಿಯ ಶ್ರೀ ಮಾಧ್ವ ವಿದ್ಯಾಪೀಠದಲ್ಲಿ ನಿರ್ಧರಿಸಲಾಗಿದೆ.
ನೂರು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಎರ್ಮಾಳು ಗ್ರಾಮದಲ್ಲಿ ಜನಿಸಿದ ಶ್ರೀ ವಿದ್ಯಾಮಾನ್ಯತೀರ್ಥರು, (ಪೂರ್ವಾಶ್ರಮದ ಹೆಸರು ನಾರಾಯಣ) ತಮ್ಮ ಎಂಟನೆಯ ವಯಸ್ಸಿನಲ್ಲಿ ಶ್ರೀ ಪುತ್ತಿಗೆ ಮಠದ, ಶ್ರೀ ಸುಧೀಂದ್ರತೀರ್ಥರಿಂದ ಮಂತ್ರೋಪದೇಶ ಪಡೆದರು. ತಮ್ಮ ಹನ್ನೆರಡೆನಯ ವಯಸ್ಸಿಗೆ ಅದಮಾರು ಮಠದ ವಿಭುದಪ್ರಿಯ ತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ಶ್ರೀ ಭಂಡಾರಕೇರಿ ಮಠದ 34ನೆಯ ಯತಿಗಳಾದರು.
ಎಲ್ಲ ವಿದ್ಯೆಗಳ ನಂತರ ವಿದ್ಯಾಪೀಠಗಳ ಸ್ಥಾಪನೆ, ಪಾಠ ಪ್ರವಚನ, ಜಪ, ತಪ ನಿರತ ಶ್ರೀ ವಿದ್ಯಾಮಾನ್ಯರು, ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು, ಶ್ರೀ ಪುತ್ತಿಗೆ ಮಠದ ಶ್ರೀ ಸುಗಣೇಂದ್ರತೀರ್ಥರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು, ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರು ಮತ್ತು ಶ್ರೀಕುಂದಾಪುರ ವ್ಯಾಸರಾಜ ಮಠದ ಶ್ರೀ ಲಕ್ಷ್ಮಿಂದ್ರತೀರ್ಥರಿಗೆ ಪಾಠ ಹೇಳುವದರ ಜೊತೆಗೆ ನೂರಾರು ಗೃಹಸ್ಥ ಶಿಷ್ಯರಿಗೂ ಪಾಠ ಹೇಳಿದರು. ಅವರಲ್ಲಿ ಜಾಲಿಹಾಲ ರಾಘವೇಂದ್ರಾಚಾರ್ಯರು (ಗಂಗೂರ), ಶ್ರೀ ತೆರಗುಂಡಿ ಗೋಪಾಲಾಚಾರ್ಯರು, ಶ್ರೀ ಕೊರ್ಲಹಳ್ಳಿ ರಾಘವೇಂದ್ರಾಚಾರ್ಯರು, ಶ್ರೀ ಕೊರ್ಲಹಳ್ಳಿ ನರಸಿಂಹಾಚಾರ್ಯರು, ಶ್ರೀ ಜಕ್ಕಲಿ ಬೋಧರಾಯಾಚಾರ್ಯರು, ಶ್ರೀ ಪಿ.ಕೆ. ಹರಿದಾಸಾಚಾರ್ಯರು, ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಪ್ರಮುಖರು.
ಶ್ರೀ ವಿದ್ಯಾಮಾನ್ಯರು ದೇಶ ಸಂಚಾರ ಮಾಡಿದರು. ಕಾಲು ನಡಿಗೆಯಿಂದ ಶ್ರೀ ಬದರಿ ನಾರಾಯಣ ದರ್ಶನ ಮಾಡಿದರು. ಅನೇಕ ಗ್ರಂಥ ರಚಿಸಿದರು. ಇಂದಿಗೂ ವಿದ್ಯಾಮಾನ್ಯರ ಶಿಷ್ಯ-ಪ್ರಶಿಷ್ಯರ ಸಂತತಿ ಬೆಳೆಯುತ್ತಿದೆ. ಚರ್ಚಾಗೋಷ್ಠಿ, ವಿದ್ಯಾರ್ಥಿಗಳ ಪರೀಕ್ಷೆ, ಜ್ಞಾನ ಶಿಬಿರ, ಅಧ್ಯಾತ್ಮ ಶಿಬಿರ, ಅನೇಕ ಗ್ರಂಥ ರಚನೆಗಳಲ್ಲಿ ತಾವೂ ತೊಡಗಿಕೊಂಡಿದ್ದಲ್ಲದೆ, ತಮ್ಮ ಶಿಷ್ಯರನ್ನು ಇಂಥದೇ ಕಾರ್ಯಗಳಲ್ಲಿ ತೊಡಗಿದರು. ಶ್ರೀ ವಿದ್ಯಾಮಾನ್ಯರ ಶಿಷ್ಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ತಮ್ಮ ಮುಂದೆಯೇ ಇಡೀ ದೇಶದ ತುಂಬ ಅಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಬೆಳೆದು, ಯತಿ ಶ್ರೇಷ್ಠರಾದದ್ದನ್ನು ಕಂಡು ಆನಂದಪಟ್ಟರು.
ಅನೇಕ ಗುರುಕುಲ, ಪಾಠಶಾಲೆ ಪ್ರಾರಂಭಿಸಿದರು, ದೇವಸ್ಥಾನಗಳನ್ನು ನಿರ್ಮಿಸಿದರು. ಶ್ರೀ ಸತ್ಯಧ್ಯಾನತೀರ್ಥರ ಜತೆ ಅನೇಕ ಶಾಸ್ತ್ರಾರ್ಥ ವಿಷಯಗಳ ಸಭೆಗಳಲ್ಲಿ ಭಾಗವಹಿಸಿ ಗುರುವಿನ ಮನಸ್ಸನ್ನು ಗೆದ್ದವರು. ತಮ್ಮ ಕೊನೆಯ ದಿನಗಳನ್ನು ತಮ್ಮ ಪ್ರಿಯಶಿಷ್ಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ನಾಲ್ಕನೆಯ ಪರ್ಯಾಯ ಅವಧಿಯಲ್ಲಿ ಉಡುಪಿಯಲ್ಲಿಯೇ ಕಳೆದರು. ಯಾವಾಗಲೂ ಏಕಾದಶಿ ಆಚರಣೆ ಬಗ್ಗೆ ಚಿಂತಿಸುತ್ತಿದ್ದ ಶ್ರೀ ವಿದ್ಯಾಮಾನ್ಯರು ವೈಶಾಖ ಶುದ್ಧ ಏಕಾದಶಿಯಂದೇ 14ನೇ ಮೇ 2000ರಲ್ಲಿ ವೃಂದಾವನಸ್ಥರಾದರು
ಶ್ರೀ ವಿದ್ಯಾಮಾನ್ಯತೀರ್ಥರು ಅವರ ಪ್ರಿಯಶಿಷ್ಯರಲ್ಲಿ ಒಬ್ಬರಾಗಿದ್ದ ಧಾರವಾಡದ ಪಂ. ತೆರಗುಂಡಿ ಗೋಪಾಲ ಕೃಷ್ಣಾಚಾರ್ಯರು, ಶ್ರೀ ಮಾಧ್ವವಿದ್ಯಾಪೀಠಕ್ಕೆ ನೀಡಿದ ಜಾಗೆಯಲ್ಲಿ ಗೋಪಾಲಕೃಷ್ಣ, ಶ್ರೀ ಮಧ್ವಾಚಾರ್ಯರ ಪ್ರತಿಮೆಗಳನ್ನು ಹಾಗೂ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನವನ್ನು ಪ್ರತಿಷ್ಠಾಪಿಸಿದರು. ಭಂಡಾರಕೇರಿ ಮಠದ ಇಂದಿನ ಪೀಠಾಧಿಪತಿಗಳಾದ ಶ್ರೀ ವಿದ್ಯೇಶತೀರ್ಥರು, ಧಾರವಾಡದ ಭಕ್ತರ ಮಧ್ಯೆ ಶ್ರೀ ವಿದ್ಯಾಮಾನ್ಯತೀರ್ಥರ ಹದಿಮೂರನೆಯ ಆರಾಧನೆಯನ್ನು ಶ್ರೀ ಮಾಧ್ವ ವಿದ್ಯಾಪೀಠದಲ್ಲಿ ವೈಭವದಿಂದ ಆಚರಿಸಲು ಒಪ್ಪಿಕೊಂಡದ್ದು ನಿಜಕ್ಕೂ ಧಾರವಾಡದ ಆಸ್ತಿಕ ಭಕ್ತರ ಸೌಭಾಗ್ಯ.
-ಲೇಖನ: ಡಾ. ಹ.ವೆಂ. ಕಾಖಂಡಿಕಿ, ಧಾರವಾಡ