ನಿರುದ್ಯೋಗ, ಅಸಮಾನತೆ ಹೆಚ್ಚಳ
ಹುಬ್ಬಳ್ಳಿ: 65 ವರ್ಷಗಳ ಸ್ವಾತಂತ್ರ್ಯ ನಂತರದ ಸ್ಥಿತಿ-ಗತಿಯನ್ನು ಸಿಂಹಾವಲೋಕನ ಮಾಡಿದಾಗ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ಅಸಮಾನತೆಗಳಂತಹ ಸಂಗತಿಗಳು ಗೋಚರಿಸುತ್ತವೆ ಎಂದು ಹಿರಿಯ ರಾಜ್ಯಶಾಸ್ತ್ರಜ್ಞ ಡಾ. ಕೆ. ರಾಘವೇಂದ್ರರಾವ್ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ದಿ. ಎಂಬಾರ್ ಭಾಷ್ಯಾಚಾರ್ಯ ಅವರ 28ನೇ 'ಶ್ರದ್ಧಾ ಸಮರ್ಪಣಾ ದಿನ' ಆಚರಣೆ ಅಂಗವಾಗಿ ನಗರದ ಡಾ. ಕೆ.ಎಸ್. ಶರ್ಮಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ 'ಭಾರತ ಸ್ವಾತಂತ್ರ್ಯಾ ನಂತರದ ಇಂದಿನ ಸ್ಥಿತಿ-ಗತಿ: ಒಂದು ಚಿಂತನ-ಮಂಥನ' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಂಸದೀಯ ಪ್ರಜಾಸತ್ತೆಯ ಮುಖವಾಡ ಧರಿಸಿರುವ ರಾಜಕೀಯ ವ್ಯವಸ್ಥೆ, ಬಂಡವಾಳಶಾಹಿ-ಭೂಮಾಲಕ ವರ್ಗಗಳ ಕಪಿಮುಷ್ಠಿಯಲ್ಲಿ ಸಿಲುಕಿ ಶ್ರೀಮಂತರ ರಾಜ್ಯಪಾಲನೆಯಾಗಿ ಪರಿವರ್ತಣೆಯಾಗಿದೆ. ಈ ಅವನತಿಗೆ ಕಾರಣಗಳನ್ನು ಶೋಧಿಸುವ ಅವಶ್ಯಕತೆ ಇದೆ. ಪರ್ಯಾಯ ವ್ಯವಸ್ಥೆಯ ಅನ್ವೇಷಣೆ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಮನಶಾಸ್ತ್ರಜ್ಞ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ. ಕೃಷ್ಣಮೂರ್ತಿ ಮಾತನಾಡಿ, ಸ್ವಾತಂತ್ರ್ಯ ನಂತರವೂ ಭಾರತೀಯರ ಭವಿಷ್ಯವನ್ನು ಪರಕೀಯ ಶಕ್ತಿ ರೂಪಿಸುತ್ತದೆ. ಈ ಗುಲಾಮ ಮನಸ್ಥಿತಿಯಿಂದ ಹೊರಬರದೇ ಇರುವುದು ದೊಡ್ಡ ದುರಂತ ಎಂದು ಖೇದ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ನಂತರದ ಆರು ದಶಕಗಳಲ್ಲಿ ಬಡವರು-ದುಡಿಯುವವರು ಹೆಚ್ಚು ಶೋಷಿತರಾಗುತ್ತಿದ್ದಾರೆ ಎಂದ ಹಿರಿಯ ಕಾರ್ಮಿಕ ಮುಖಂಡ ಡಾ. ಕೆ.ಎಸ್. ಶರ್ಮಾ, ಮಾರ್ಕ್ಸ್‌ವಾದ ಸಿದ್ಧಾಂತ ಆಧಾರಿತ ವರ್ಗ ಹೋರಾಟ ಹಾಗೂ ತನ್ಮೂಲಕ ವರ್ಗರಹಿತ ನಿಜವಾದ ಸಮಾಜವಾದಿ ಸಮಾಜ ಸ್ಥಾಪನೆ ಇದಕ್ಕೆ ಪರಿಹಾರ ಎಂದರು.
'ದಿ ಸಿಂಗಿಂಗ್ ಫಿಗ್ ಟ್ರೀ' ಹಾಗೂ 'ವನಸುಮ' ಕೃತಿಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕೃತಿ ರಚನೆಕಾರರಾದ ಡಾ. ಕೆ. ರಾಘವೇಂದ್ರರಾವ ಹಾಗೂ ಪ್ರಕಾಶ ಪ್ರಭು ಅವರನ್ನು ಸಂಸ್ಥೆಯ ಪರವಾಗಿ ಡಾ. ಕೆ.ಎಸ್. ಶರ್ಮಾ ಹಾಗೂ ಡಾ. ವಾಮನ ಬೇಂದ್ರೆ ಸನ್ಮಾನಿಸಿದರು.
ಬೇಂದ್ರೆ ರಾಷ್ಟ್ರೀಯ ಟ್ರಸ್ಟಿನ ಅಧ್ಯಕ್ಷ ಡಾ. ಶಾಮಸುಂದರ ಬಿದರಕುಂದರಿ, ಡಾ. ವಿ.ಆರ್.ಬಿ. ಆಚಾರ್ಯ, ಮಾರುತಿ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ರವೀಂದ್ರ ಶಿರೋಳ್ಕರ ನಿರೂಪಿಸಿದರು. ಪ್ರೊ. ಸಂಜಯ ತ್ರಾಸದ ವಂದಿಸಿದರು.