ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರೈತರ ಮೈ, ಮನ ಹಗುರಾಗಿಸಿದ ಚಕ್ಕಡಿ ಶರತ್ತು

Lingaraj Badiger
Updated On : 20 May 2013, 11:20 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 19
ಭೂಮಿ ಹಸನು ಮಾಡಿಕೊಂಡು ಮಳೆರಾಯನಿಗೆ ಕಾದು ಕುಳಿತಿರುವ ರೈತರಿಗೆ ಈಗ ಬಿಡುವು. ಎತ್ತುಗಳು ಮುಂದಿನ ಹಂಗಾಮಿಗೆ ಸಜ್ಜಾಗಬೇಕು. ಒಟ್ಟಿನಲ್ಲಿ ಎತ್ತುಗಳ ಮೈ ಮತ್ತು ರೈತರ ಮನ ಎದುರಾಗುವ ಮುಂಗಾರು ಹೊತ್ತಿಗೆ ಚುರುಕಾಗಿರಬೇಕು. ಇಂತಹ ಚುರುಕು ಮೂಡಿಸುವ ಕೆಲಸ ಗ್ರಾಮೀಣ ಭಾಗಗಳಲ್ಲಿ ಈ ದಿನಗಳಲ್ಲಿ ನಡೆಯುವುದು ಸಾಮಾನ್ಯ.
ರೈತಾಪಿ ವರ್ಗವೇ ಹೆಚ್ಚಾಗಿ ಇರುವ ಹುಬ್ಬಳ್ಳಿಯ ಉಣಕಲ್ ಮತ್ತು ಭೈರಿದೇವರ ಕೊಪ್ಪದ ಪರಿಸರದಲ್ಲಿ ಭಾನುವಾರ ರೈತರು ಮತ್ತು ರೈತರ ಎತ್ತುಗಳಿಗಾಗಿ ಖಾಲಿ ಚಕ್ಕಡಿ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಉಣಕಲ್ ಹೆಬ್ಬಳ್ಳಿ ರಸ್ತೆಯಲ್ಲಿರುವ ಮಲ್ಲನಗೌಡ್ರ ಪಾಟೀಲ ಅವರ ಹೊಲದಲ್ಲಿ ಜರುಗಿದ ತುರುಸಿನ ಸ್ಪರ್ಧೆಯಲ್ಲಿ ತರಹೆವಾರಿ ಎತ್ತುಗಳು ಕಾಣಿಸಿಕೊಂಡು ತಮ್ಮ ಶಕ್ತಿ ರೈತನ ಯುಕ್ತಿ ಎರಡು ಒರೆಗೆ ಹಚ್ಚಲ್ಪಟ್ಟವು.
ಶನಿವಾರ ಬೆಳಗ್ಗೆ ಹಸನು ಮಾಡಿದ್ದ ಹೊಲಕ್ಕೆ ಕಾಲಿರಿಸಿದ ಜೋಡಿ ಎತ್ತುಗಳ ಸಾಲು ರೈತಾಪಿ ವರ್ಗದಲ್ಲಿ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿತ್ತು. ವಯಸ್ಸಾದ ರೈತರು ತಮ್ಮ ತಮ್ಮಲ್ಲಿ ಎತ್ತಿನ ಜಾತಿ, ಸುಳಿ, ಅವುಗಳ ಕಾಲು ಹೀಗೆ ಅನೇಕ ರೀತಿಯಲ್ಲಿ ಎತ್ತುಗಳ ಸಾಮರ್ಥ್ಯ ಏಷ್ಟಿದೆ ಎಂದು ಹೇಳಿಕೊಳ್ಳುತ್ತಿದ್ದರು.
ಸ್ಪರ್ಧೆಗೆ ಇಳಿದ ಎತ್ತುಗಳಲ್ಲಿ ಇದೀಗ ತಾನೇ ವಯಸ್ಸಿಗೆ ಬಂದ ಹೋರಿಗಳು ಇದ್ದವು. ಹೋರಿಗಳಿಗೆ ಈಗಿನಿಂದಲೇ ನೋಗದ ರೂಢಿ ಮಾಡಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರೈತನಿಗೆ ಸಾಕಷ್ಟು ತೊಂದರೆ ನೀಡುತ್ತವೆ. ಆದ್ದರಿಂದಲೇ ಈ ಬಾರಿ ಖಾಲಿ ಚಕ್ಕಡಿಗೆ ಹೂಡಿದರೆ ಹೋರಿಗಳಿಗೆ ರೂಢಿಯಾಗುತ್ತದೆ ಎನ್ನುತ್ತಿದ್ದ ಕೆಲವು ರೈತರು ಅವುಗಳ ಸ್ವಭಾವ, ನೋಗಕ್ಕೆ ಹೆಗಲು ಕೊಟ್ಟ ಮೇಲೆ ನಡೆದುಕೊಳ್ಳುವ ರೀತಿಯನ್ನು ಸಹ ರೈತರಿಗೆ ವಿವರಿಸುವ ಕೆಲಸ ಆವ್ಯಾಹತವಾಗಿ ನಡೆದಿತ್ತು.
ಸ್ಪರ್ಧೆ ಶುರುವಾಗುತ್ತಿದ್ದಂತೆಯೇ ಚಕ್ಕಡಿಗೆ ನೊಗ ಕೊಟ್ಟು ಅಂಕಣಕ್ಕೆ ಇಳಿಯಲಾರಂಭಿಸಿದ ಎತ್ತುಗಳಲ್ಲಿ ಕೂಡ ತರಹೇವಾರಿ ಜಾತಿ, ಬಣ್ಣ, ನೋಟ ನೆರೆದಿದ್ದ ರೈತರಲ್ಲಿ ಯಾವ ಜೋಡಿ ಗೆಲ್ಲುತ್ತದೆ ಎಂಬ ಚರ್ಚೆ ಆರಂಭವಾಗಿತ್ತು. ಚಕ್ಕಡಿಯೊಳಗೆ ಕ್ವಿಂಟಲ್ ಉಸುಕು, ಚಕ್ಕಡಿ ಹೊಡೆಯುವ ರೈತ ಮತ್ತು ಆತನಿಗೊಬ್ಬ ಸಹಾಯಕನನ್ನು ನಿಗದಿತ ಗುರಿವರೆಗೆ ಉಳಿದೆಲ್ಲ ಎತ್ತುಗಳಿಗಿಂತ ಬೇಗ ತಲುಪುವ ಜೋಡಿಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನಿಗದಿಪಡಿಸಲಾಗಿತ್ತು.
ಹೋರಿಗಳ ಗಮ್ಮತ್ತು: ಇನ್ನು ಕೋಡು ಮೂಡಿರದ ಆದರೆ ಹರೆಯಕ್ಕೆ ಬಂದಿರುವ ಅನೇಕ ಹೋರಿಗಳ ಜೋಡಿಗಳನ್ನು ಖಾಲಿ ಚಕ್ಕಡಿ ಸ್ಪರ್ಧೆಗೆ ತರಲಾಗಿತ್ತು. ಇವುಗಳ ಜೊತೆಗೆ ಈಗಾಗಲೇ ಹೊಲದಲ್ಲಿ ದುಡಿದು ಗಟ್ಟಿಮುಟ್ಟಾಗಿರುವ ಎತ್ತುಗಳ ರಭಸದ ಓಟವೂ ನೆರೆದಿದ್ದ ರೈತರಲ್ಲಿ ಹರ್ಷೋಲ್ಲಾಸ ಮೂಡಿಸುವಂತೆ ಮಾಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement