ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಉಕಕ್ಕೆ ಕಾಲಿರಿಸಿದ ತಾಜ್ ದಿ ಗೇಟವೇ ಹೋಟೆಲ್

Lingaraj Badiger
Updated On : 21 May 2013, 11:22 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 20
ದಕ್ಷಿಣ ಕರ್ನಾಟಕದ ಪ್ರಮುಖ ನಗರಗಳಿಗೆ ಸೀಮಿತವಾಗಿದ್ದ ಟಾಟಾ ಸಮೂಹದ ತಾಜ್ ಗ್ರೂಪ್ ಆಫ್ ಹೋಟೆಲ್ಸ್‌ನ ತಾಜ್ ದಿ ಗೇಟವೇ ಹೋಟೆಲ್ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕಕ್ಕೆ ಹುಬ್ಬಳ್ಳಿ ಮುಖಾಂತರ ಕಾಲಿರಿಸಿದೆ ಎಂದು ಗೇಟವೇ ಹೋಟೆಲ್ಸ್ ಮತ್ತು ರೇಸಾರ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾತ್ ವರ್ಮಾ ಹೇಳಿದರು.
ಮಂಗಳವಾರ ನಗರದ ತಾಜ್ ದಿ ಗೇಟವೇ ಹೋಟೆಲ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರು, ಚಿಕ್ಕಮಗಳೂರು ಮತ್ತು ಮಂಗಳೂರಿನಲ್ಲಿ ಈಗಾಗಲೇ ದಿ ಗೇಟವೇ ಹೋಟೆಲ್‌ಗಳನ್ನು ನಡೆಸಲಾಗುತ್ತಿದ್ದು, ದೇಶಾದ್ಯಂತ ಈ ಬ್ರಾಂಡ್‌ನ 22 ಹೋಟೆಲ್‌ಗಳಿವೆ ಎಂದು ಹೇಳಿದರು.
92 ಕೊಠಡಿ: ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಗೇಟವೇ ಹೋಟೆಲ್ ವ್ಯವಹಾರಿಕ ಉದ್ದೇಶದ ಪ್ರಯಾಣಿಕರ ಮತ್ತು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಹೊಂದಿದೆ. ಉಣಕಲ್ ಕೆರೆಯ ದಡದ ಮೇಲೆ ಇರುವ ಗೇಟವೇ ಹೋಟೆಲ್‌ನಲ್ಲಿ ವಿಶಾಲವಾದ ಸುಸಜ್ಜಿತ 92 ಕೊಠಡಿಗಳಿದ್ದು, ಇದರಲ್ಲಿ ನಾಲ್ಕು ಸೂಟ್‌ಗಳಿವೆ. ಪ್ರತಿ ಕೊಠಡಿಯಿಂದ ಉಣಕಲ್ ಕೆರೆಯ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಅತಿಥಿಗಳಿಗೆ ವ್ಯಾಯಾಮ ಮಾಡುವುದಕ್ಕೆ ಜಿಮ್ ಮತ್ತು ಈಜುಗೊಳವಿವೆ. 3800 ಚದರಡಿ ವಿಸ್ತಾರದ ಸ್ಥಳ ಬೃಹತ್ ಸಭೆ ಆಯೋಜಿಸಲು ಸೂಕ್ತವಾಗಿದೆ ಎಂದರು. ಸೌಕರ್ಯ, ಆತ್ಮೀಯತೆಯಂತಹ ಸೌಲಭ್ಯಗಳನ್ನು ನೋಡುವ ಪ್ರವಾಸಿಗರಿಗಾಗಿ ಹೋಟೆಲ್ಸ್ ಆ್ಯಂಡ್ ರಿಸಾರ್ಟ್ಸ್ ಲಿಮಿಟೆಡ್‌ನ್ನು 8 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಪ್ರವೇಶದ್ವಾರ, ಭೇಟಿ, ವ್ಯಾಯಾಮ ಸೇರಿದಂತೆ ಇನ್ನಿತರ ವಿಭಾಗಗಳು ದಿ ಗೇಟವೇ ಹೋಟೆಲ್‌ನಲ್ಲಿವೆ. ಯೋಗ ಆಸಕ್ತರಿಗಾಗಿ ಇನ್ ರೂಂ ಯೋಗಾ ಸೌಲಭ್ಯಗಳನ್ನು ಒದಗಿಸಲಾಗಿದೆ.
ಬೆಳವಣಿಗೆ ಹಂತದಲ್ಲಿದೆ: ನಂತರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಪ್ರಭಾತ ವರ್ಮಾ, ಆತಿಥ್ಯ ವಲಯವನ್ನು ಜನರು ಉದ್ಯಮವನ್ನಾಗಿ ಸ್ವೀಕರಿಸುವ ಅಗತ್ಯವಿದ್ದು, ಈ ಕ್ಷೇತ್ರ ಇನ್ನೂ ಬೆಳವಣಿಗೆ ಹಂತದಲ್ಲಿದೆ. ಭಾರತದಲ್ಲಿ ಅಭಿವೃದ್ಧಿಯಾಗುವ ಎಲ್ಲ ಲಕ್ಷಣಗಳಿವೆ. ಭಾರತದ ಆತಿಥ್ಯ ವಲಯಕ್ಕೆ ತನ್ನದೇ ಆದ ಗ್ರಾಹಕ ಜಗತ್ತು ಇದೆ. ಚೀನಾ, ಬ್ರೆಜಿಲ್ ಮತ್ತು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಆತಿಥ್ಯ ವಲಯಕ್ಕೆ ದೇಶಿ ಗ್ರಾಹಕರ ಪ್ರಮಾಣ ಸಾಕಷ್ಟಿದೆ. ಹೀಗಾಗಿ ವಿದೇಶಿ ಗ್ರಾಹಕರನ್ನು ನೆಚ್ಚಿಕೊಳ್ಳಬೇಕಾದ ಅಗತ್ಯ ಭಾರತೀಯ ಹೋಟೆಲ್ ಉದ್ಯಮಕ್ಕಿಲ್ಲ ಎಂದು ಹೇಳಿದರು. ತಾಜ್ ಸಮೂಹದ ಹೋಟೆಲ್ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರ ಹುಬ್ಬಳ್ಳಿಯನ್ನು ಟಾಟಾ ಸಮೂಹ ಆಯ್ಕೆ ಮಾಡಿಕೊಂಡಿದ್ದು, ಭವಿಷ್ಯತ್ತಿನಲ್ಲಿ ಉತ್ತರ ಕರ್ನಾಟಕದ ಇತರ ನಗರಗಳಿಗೂ ದಿ ಗೇಟವೇ ಬ್ರಾಂಡ್ ವಿಸ್ತರಿಸಲಾಗುವುದು. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳು, ಬೃಹತ್ ಉದ್ಯಮಗಳು ಅಸ್ತಿತ್ವದಲ್ಲಿರುವ ಕಾರಣ ಈ ನಗರದಲ್ಲಿ ಟಾಟಾ ಸಮೂಹ ತನ್ನ ಹೋಟೆಲ್ ತೆರೆದಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement