ಕವಿವಿ 11 ಪಿಜಿ ವಿಭಾಗ ಮುಚ್ಚುವ ನಿರ್ಧಾರಕ್ಕೆ ಖಂಡನೆ
ಧಾರವಾಡ: ಕರ್ನಾಟಕ ವಿವಿಯ ಸುಮಾರು 11 ಸ್ನಾತಕೋತ್ತರ ವಿಭಾಗಗಳನ್ನು ಮುಚ್ಚುವ ನಿರ್ಧಾರ ಪ್ರಕಟಿಸಿರುವುದನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಓ) ಮತ್ತು ವಿದ್ಯಾರ್ಥಿಗಳ ನಿಯೋಗ ಖಂಡಿಸಿ ಸೋಮವಾರ ಕುಲಸಚಿವರಿಗೆ ಮನವಿ ಸಲ್ಲಿಸಿದೆ.
ಮಾನವಿಕ ಶಾಸ್ತ್ರಗಳು, ಭಾಷಾ ಅಧ್ಯಯನ, ಮೂಲವಿಜ್ಞಾನಗಳ ಅಧ್ಯಯನಕ್ಕೆ ಬೇಡಿಕೆ ಇಲ್ಲದಂತೆ ಮಾಡಿ ಅವುಗಳು ಅಧ್ಯಯನ ಯೋಗ್ಯವೇ ಅಲ್ಲವೆಂಬಂತಹ ಧೋರಣೆಯನ್ನು ಇಂದಿನ ವಿದ್ಯಾರ್ಥಿಗಳಲ್ಲಿ ಬಿತ್ತುವುದು ಎಲ್ಲ ಸರ್ಕಾರಗಳ ನೀತಿ. ಈ ವಿಭಾಗಗಳಿಗೆ ಪ್ರೋತ್ಸಾಹ ಕೊಡದೇ, ಅನುದಾನ ನೀಡದೇ, ಉದ್ಯೋಗ-ಅವಕಾಶಗಳನ್ನು ಸೃಷ್ಟಿ ಮಾಡದೇ, ಇಂದಿನ ವಿದ್ಯಾರ್ಥಿಗಳು ಗೆದ್ದೆತ್ತಿನ ಬಾಲ ಹಿಡಿಯುವಂತೆ ಕೇವಲ ಉದ್ಯೋಗ ಕೊಡುವ ವಿಭಾಗಗಳಿಗೆ ಮಾತ್ರ ಹೋಗುವಂತೆ ಮಾಡಿ, ಜ್ಞಾನಕ್ಕಾಗಿ ಶಿಕ್ಷಣ ಎಂಬ ಮೌಲ್ಯವನ್ನೇ ಸರ್ಕಾರಗಳು, ವಿವಿಯ ನಾಶ ಮಾಡುತ್ತಿವೆ. ಆ ವಿಭಾಗಗಳನ್ನು ನಿರ್ಲಕ್ಷಿಸಿ ಮುಚ್ಚುವ ಹಂತಕ್ಕೆ ಕೊಂಡೊಯ್ಯುವುದು ಜಾಗತೀಕರಣದ ನಂತರದ ಎಲ್ಲ ಸರ್ಕಾರಗಳ ಸಾಮಾನ್ಯ ನಿಲುವು. ನಮ್ಮ ನವೋದಯ ಹರಿಕಾರರ ಆಶಯದಂತೆ ವಿವಿಗಳು ಸಾರ್ವತ್ರಿಕ ಜ್ಞಾನಗಳ ಕೇಂದ್ರಗಳಾಗಬೇಕಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನ ಶಾಖೆಗಳನ್ನು ಮುಚ್ಚುವ ನಿರ್ಧಾರ ಸರಿಯಲ್ಲ. ಅಲ್ಲದೇ ಇಂದು ವಿದ್ಯಾರ್ಥಿಗಳಿಲ್ಲವೆಂದು ಮುಚ್ಚಿದ ವಿವಿಗಳು ನಾಳೆ ವಿದ್ಯಾರ್ಥಿಗಳು ಕಲಿಯಬೇಕೆನಿಸಿದಾಗ ಆ ವಿಭಾಗವನ್ನು ತೆರೆಯುತ್ತದೆಯೇ ಇದರಿಂದ ವಿವಿಗಳ ಆಶಯ-ಪರಿಕಲ್ಪನೆಗಳೇ ನಾಶವಾಗುವುದಿಲ್ಲವೇ? ಈ ಪ್ರಶ್ನೆಗಳಿಗೆ ಸರ್ಕಾರ ಮತ್ತು ವಿವಿ ಉತ್ತರಿಸಬೇಕಾಗಿದೆಯೆಂದು ನಿಯೋಗ ಮನವಿಯಲ್ಲಿ ಪ್ರಶ್ನಿಸಿದೆ. ಸರ್ಕಾರ ಮತ್ತು ವಿವಿಗಳು ಇಂದಿನ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ಗಳ ಅಧ್ಯಯನದ ಮಹತ್ವ ತಿಳಿಸುವ, ಪ್ರೋತ್ಸಾಹಿಸುವ ಕೆಲಸವನ್ನು ತುರ್ತಾಗಿ ಮಾಡಬೇಕು. ಈ ವಿಭಾಗಗಳನ್ನು ನಡೆಸುವುದು ಹೊರೆ ಎಂದು ಭಾವಿಸದೇ ಆ ಜ್ಞಾನವು ಸಮಾಜಕ್ಕೆ ಅವಶ್ಯಕತೆ ಇಲ್ಲವೆನ್ನುವವರೆಗೂ ನಡೆಸಬೇಕು. ವಿವಿಗಳಿಗೆ ಅವಶ್ಯಕವಾದ ಅನುದಾನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಕಾರ್ಯದರ್ಶಿ ಶರಣು ಗೋನವಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಶರ್ಮಿಳಾ, ಎಂ.ಎಂ. ಹಿರೇಮಠ, ಟಿ. ಕೃಷ್ಣಪ್ಪಾ ವಿವೇಕಾನಂದ ಇದ್ದರು.