ಜಾನಪದ ಅಸಂಘಟಿತರ, ದುರ್ಬಲರ ಕ್ಷೇತ್ರ
ಧಾರವಾಡ: ಸಾಮಾಜಿಕ ಚಳವಳಿಯ ಒಂದು ಭಾಗವಾಗಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಇಲ್ಲಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗ, ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ ಹಾಗೂ ದೃಶ್ಯ ಕಲಾ ಅಕಾಡೆಮಿ ಜಂಟಿಯಾಗಿ ಭಾನುವಾರ ಕನ್ನಡ ಅಧ್ಯಯನ ಪೀಠದಲ್ಲಿ 2ನೇ ರಾಜ್ಯಮಟ್ಟದ ಜಾನಪದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಫಾಜಿಲ್ ಎಂಬ ಖಾಸಗಿ ಸಂಸ್ಥೆ ತರುಣ ಸಂಶೋಧಕರಲ್ಲಿ ಜಾನಪದದ ಕುರಿತು ಆಸಕ್ತಿ ಬೆಳೆಸುತ್ತಾ ಜಾನಪದವನ್ನು ಬೆಳೆಸುವ ನಿಟ್ಟಿನಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಮೂರು ಹಂತಗಳಲ್ಲಿ ಈ ಸಂಸ್ಥೆ ಎರಡು ಜಾನಪದದ ಕುರಿತು ಕಾರ್ಯಾಗಾರಗಳನ್ನು ಮಾಡಿ ಜಾನಪದದ ಶಿರ್ಷಿಕೆಗಳನ್ನು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ವಿವಿ ಸಹ ಕಾರ್ಯಾನ್ಮುಖವಾಗಿದೆ ಎಂದರು.
ಜಾಗತೀಕರಣದ ಭರಾಟೆಯಲ್ಲಿ ಮೂಲ ಜಾನಪದ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಅವುಗಳನ್ನು ಉಳಿಸಿಕೊಳ್ಳಲು ಚಳುವಳಿ ಮಾಡುವ ಅಗತ್ಯವಿದೆ. ಜಾನಪದ ಕ್ಷೇತ್ರ ಅಸಂಘಟಿತರ, ದುರ್ಬಲರ ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಕ್ಷೇತ್ರವಾಗಿದ್ದು, ಭಾರತದ ಕೆಲ ರಾಜ್ಯಗಳಲ್ಲಿ ಜಾನಪದ ಅಧ್ಯಯನಕ್ಕೆ ಅಲ್ಪಸ್ವಲ್ಪ ಅವಕಾಶವಿದೆ. ಈ ಕೆಲಸ ಶೀಘ್ರಗತಿಯಲ್ಲಿ ಪ್ರಾರಂಭವಾಗಬೇಕು ಎಂದರು.
ಕರ್ನಾಟಕ ವಿವಿ ಕುಲಸಚಿವ ಡಾ.ಜಿ.ಬಿ. ನಂದನ್ ಮಾತನಾಡಿ, ಜಾನಪದ ಸಾಹಿತ್ಯ ನಮ್ಮ ಹುಟ್ಟು. ಬಾಲ್ಯ ಹಾಗೂ ಸಾವಿನ ಜೊತೆಗಿನ ಒಂದು ಭಾಗ. ನಮ್ಮ ಮೂಲ ಸಂಸ್ಕೃತಿಯಾದ ಜಾನಪದ ಸಾಹಿತ್ಯ ಇರದೇ ಹೋಗಿದ್ದರೆ ಇಂದಿನ ಸಂಸ್ಕೃತಿ ಇಷ್ಟೊಂದು ಮೇಲೆತ್ತರಕ್ಕೆ ಬೆಳೆಯುತ್ತಿರಲಿಲ್ಲ. ಆದರೆ, ಕಾಲ ಗತಿಸಿದಂತೆ ನಾಗರೀಕತೆಯ ಹೆಸರಿನಲ್ಲಿ ನಾವು ಭೌತಿಕ ಸಂಪತ್ತಿನ ಬೆನ್ನು ಹತ್ತಿ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಜಾನಪದ ಸಾಹಿತ್ಯವನ್ನು ದೂರ ತಳ್ಳುತ್ತಿದ್ದೇವೆ. ಇಂತಹ ಜಾನಪದ ಸಂಸ್ಕೃತಿಯನ್ನು ನಾವು ಉಳಿಸಿಕೊಳ್ಳದೇ ಹೋದರೆ ಈ ನಾಡಿನ ಸಂಸ್ಕೃತಿಯ ಪರಂಪರೆ ಅದೋಗತಿಗೆ ಹೋಗುತ್ತದೆ ಎಂದರು.
ಅಧ್ಯಕ್ಷತೆಯನ್ನು ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ. ಮಹೇಶ್ವರಯ್ಯ ವಹಿಸಿದ್ದರು.