ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಅರ್ಧ ಗಂಟೆ ಉತ್ತಮ ಮಳೆ

Lingaraj Badiger
Updated On : 21 May 2013, 11:22 am

ಧಾರವಾಡ:  ಮಳೆಗಾಗಿ ಹಾತೊರೆಯುತ್ತಿದ್ದ ಧಾರವಾಡ ಸೋಮವಾರ ಸಂಜೆ ತುಸು ತಣ್ಣಗಾಗಿತ್ತು. ಸುಮಾರು ಅರ್ಧ ಗಂಟೆ ಸುರಿದ ಉತ್ತಮ ಮಳೆಯಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನತೆ ತಂಪಿನ ಅನುಭವ ಪಡೆದರು. ಒಂದು ವಾರದಿಂದ ಬರೀ ಮೋಡ ಮುಸುಕಿದ ವಾತಾವರಣ ಇರುತ್ತಿತ್ತು. ಬಿಸಿಲಿನ ತಾಪದಿಂದ ಬೆಂದಿದ್ದ ಇಲ್ಲಿನ ಜನಕ್ಕೆ ಸೋಮವಾರದ ಮಳೆಗೆ ಹಿತಾನುಭವ ತಂದಿದೆ. ಸಂಜೆ 5ರಿಂದ 5.30ರ ವರೆಗೆ ರಭಸದ ಗಾಳಿ, ಗುಡಗು-ಸಿಡಿಲಿನ ಮಳೆ ಸುರಿಯಿತು.  ಗಾಳಿಯ ಹೊಡೆತಕ್ಕೆ ಇಲ್ಲಿನ ಕರ್ನಾಟಕ ವಿವಿಗೆ ಹೋಗುವ ಹು-ಧಾ ಓನ್ ಕೇಂದ್ರದ ಎದುರಿನ ರಸ್ತೆಯಲ್ಲಿ ಬೃಹತ್ ಗಿಡವೊಂದು ಉರುಳಿ ಬಿದ್ದಿದೆ. ಪ್ರಾಣ ಹಾನಿಯಾಗಿಲ್ಲ. ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರಿಂದ ಕಂಬಗಳು, ತಂತಿ ನೆಲಕ್ಕೆ ಬಿದ್ದಿವೆ. ಇದರಿಂದ ರಾತ್ರಿ ವರೆಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು. ಅಲ್ಲದೇ, ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಇದಲ್ಲದೇ, ಆಲೂರು ವೆಂಕಟರಾವ್ ಸಭಾಭವನದ ಬಳಿ ರಸ್ತೆಯಲ್ಲಿ ಗಿಡದ ದೊಡ್ಡ ದೊಡ್ಡ ಟೊಂಗೆಗಳು ಮುರಿದು ಬಿದ್ದಿವೆ. ಏಕಾಏಕಿ ಮಳೆ ಜೋರಾಗಿ ಸುರಿದಿದ್ದರಿಂದ ತಗ್ಗು ಪ್ರದೇಶಗಳಲ್ಲಿನ ಮನೆಗಳಲ್ಲಿ ಚರಂಡಿ ನೀರು ನುಗ್ಗಿತ್ತು. ಮಳೆ ಬರೀ ನಗರ ಪ್ರದೇಶ ಮಾತ್ರವಲ್ಲದೇ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದ್ದರಿಂದ ರೈತರ ಮುಖದಲ್ಲಿ ತುಸು ನಗುವಿನ ಛಾಯೆ ಎದ್ದು ಕಾಣುತ್ತಿತ್ತು. ಮುಂಗಾರು ಹಂಗಾಮಿನ ಬಿತ್ತನೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಈ ಮಳೆ ತುಸು ಸಂತಸ ತಂದಿದೆ. ಇದರಂತೆ ಇನ್ನೆರೆಡು ಮಳೆ ಬಿದ್ದರೆ ಸಾಕು ಬಿತ್ತನೆ ಕಾರ್ಯ ಶುರುವಾಗುತ್ತದೆ. ಬಿತ್ತನೆ, ಬೀಜ, ಗೊಬ್ಬರ ಸಂಗ್ರಹ ಕಾರ್ಯ ಆರಂಭವಾಗಿದ್ದು, ಮೇ ಕೊನೆಯಲ್ಲಿ ಬಿತ್ತನೆ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಮಳೆರಾಯ ಮಾತ್ರ ಇದಕ್ಕೆ ಅನುವು ಮಾಡಿಕೊಡಬೇಕಷ್ಟೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement