ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮುಗಿದ ಖಾತೆ ಹಂಚಿಕೆ: ಮೀಸಲಾತಿಗೆ ಕ್ಷಣಗಣನೆ

Lingaraj Badiger
Updated On : 21 May 2013, 11:30 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 20
ಅಧಿಕಾರದ ಗದ್ದುಗೆ ಏರಲು ಮೀಸಲಾತಿ ಪ್ರಕಟಗೊಳ್ಳುವ ಕ್ಷಣಗಣನೆಗೆ ಕಾಯುವ ಸ್ಥಿತಿ ರಾಜ್ಯದ 208 ಸ್ಥಳೀಯ ಸಂಸ್ಥೆಗಳಲ್ಲಿ ಉದ್ಭವಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಸಚಿವ ಸಂಪುಟ ರಚನೆಗೊಂಡಿದ್ದರೂ ಖಾತೆ ಹಂಚಿಕೆಗಳ ಗೊಂದಲದಿಂದಾಗಿ ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿರಲಿಲ್ಲ.
ಇದೀಗ ವಿನಯಕುಮಾರ ಸೊರಕೆ ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಯಾವುದೇ ಕ್ಷಣದಲ್ಲಿ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಕೆಲ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ಸಮೀಪ ಇರುವ ಪುರಪಿತೃರು ತಮ್ಮ ಪ್ರಭಾವ ಬೀರಿ ತಮಗೆ ಅನುಕೂಲವಾಗುವಂತಹ ಮೀಸಲಾತಿ ನಿಗದಿಪಡಿಸಲು ತೆರೆಮರೆಯ ಕಸರತ್ತು ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ.
ಮೂಲಗಳ ಪ್ರಕಾರ ಇನ್ನೂ ಕೆಲವೇ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆಯಲ್ಲಿ ಮೀಸಲಾತಿ ಪ್ರಕಟಣೆಗೆ ಪೂರ್ವ ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿದ್ದು, ಯಾವುದೇ ಸಮಯದಲ್ಲಿ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಎರಡೂವರೆ ತಿಂಗಳ ಹಿಂದೆ ಚುನಾವಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು, ಬೆಳಗಾವಿ, ಗುಲ್ಬರ್ಗಾ, ದಾವಣಗೆರೆ, ಬಳ್ಳಾರಿ ಸೇರಿದಂತೆ ಒಟ್ಟು 7 ಮಹಾನಗರ ಪಾಲಿಕೆಗಳು, 43 ನಗರ ಸಭೆ, 93 ಪುರಸಭೆ, 65 ಪಟ್ಟಣ ಪಂಚಾಯಿತಿ ಸೇರಿದಂತೆ ಒಟ್ಟು 208 ಸ್ಥಳೀಯ ಸಂಸ್ಥೆಗಳಿಗೆ ಕಳೆದ ಮಾರ್ಚ್ 7ರಂದು ಚುನಾವಣೆ ನಡೆದಿತ್ತು.
ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಗೆಲುವು ಕಾಣುವಲ್ಲಿ ತಿಣುಕಾಡಿತಲ್ಲದೇ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೊದಲಿನಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದವು. ಆದರೆ, ಇದೇ ಸಂದರ್ಭದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೊಂಡಿದ್ದರಿಂದಾಗಿ ಚುನಾವಣೆ ನೀತಿ ಸಂಹಿತೆಯಿಂದಾಗಿ ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಳ್ಳಲಿಲ್ಲ.
ವಿಧಾನಸಭೆ ಚುನಾವಣೆ ಪೂರ್ಣಗೊಂಡು ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಥಳೀಯ ಸಂಸ್ಥೆಗಳಲ್ಲಿ ಗದ್ದುಗೆ ಏರುವ ತೆರೆಮರೆ ರಾಜಕೀಯ ಮತ್ತೆ ಪ್ರಾರಂಭಗೊಂಡಿತು. ಇದೀಗ ನಗರಾಭಿವೃದ್ಧಿ ಸಚಿವರಾಗಿ ವಿನಯಕುಮಾರ ಸೊರಕೆ ನೇಮಕಗೊಂಡಿದ್ದು, ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಸುಮಾರು ಎರಡೂವರೆ ತಿಂಗಳಾಗಿದ್ದರೂ ನೂತನವಾಗಿ ಚುನಾಯಿತರಾದ ಪುರಪಿತೃರು ಅಧಿಕಾರದ ರುಚಿ ಅನುಭವಿಸಲು ಸಾಧ್ಯವಾಗಿರಲಿಲ್ಲ. ಆದರೆ, ವಿಧಾನಸಭೆ ಚುನಾವಣೆ ನಡೆದ ನಂತರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಈ ಮೊದಲಿದ್ದ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾದವು.
ವಿಧಾನಸಭೆ ಚುನಾವಣೆಯಲ್ಲಿ ಈ ಮೊದಲಿನ ಕ್ಷೇತ್ರಗಳಲ್ಲಿದ್ದ ಬಿಜೆಪಿ ಶಾಸಕರಲ್ಲಿ ಬಹುತೇಕರು ಗೆಲುವು ಸಾಧಿಸುವಲ್ಲಿ ವಿಫಲವಾಗಿರುವುದು ಸ್ಥಳೀಯ ಸಂಸ್ಥೆಗಳ ಮೇಲೂ ನೇರ ಪರಿಣಾಮ ಬೀರಿತು.
ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ಥಳೀಯ ಶಾಸಕರಿಗೂ ಮತದಾನ ಹಕ್ಕಿರುವುದೇ ಇದಕ್ಕೆ ಕಾರಣ. ಈ ಮೊದಲು ಬಹುತೇಕ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರ ಬದಲು ಇತರ ಪಕ್ಷಗಳ ಶಾಸಕರು ಚುನಾಯಿತರಾಗಿದ್ದರಿಂದ ಸಹಜವಾಗಿಯೇ ಮೊದಲಿನ ಲೆಕ್ಕಾಚಾರ ತಿರುವುಮುರುವಾಯಿತು.
- ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement