ವಾಣಿಜ್ಯ ನಗರಿಯಲ್ಲಿ ರಭಸದ ಮಳೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 20
ಸೋಮವಾರ ಸಂಜೆ ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗುಡುಗು-ಮಿಂಚು ಸಹಿತ ಮಳೆ ಸುರಿಯಿತು. ಬೆಳಗ್ಗೆಯಿಂದ ಸುಡು ಬಿಸಿಲಿನ ವಾತಾವರಣವಿದ್ದರೂ ಮಧ್ಯಾಹ್ನದ ನಂತರ ಮೋಡ ಕವಿದಿತ್ತು. ಸಂಜೆ 4.30ರಿಂದ ಜಿಟಿಜಿಟಿ ಮಳೆ, ರಭಸದ ಗಾಳಿ, ಗುಡುಗು-ಮಿಂಚು ಆಗಾಗ ಕಾಣಿಸುತ್ತಿತ್ತು. ದಟ್ಟ ಮೋಡಗಳ ಮಧ್ಯೆ ಸಂಜೆ ಮತ್ತೆ ಬಿಸಿಲು ಕಂಡಿದ್ದರಿಂದ ಮಳೆ ಸುರಿಯುವ ಸಾಧ್ಯತೆ ಕಡಿಮೆ ಎನ್ನುವಂತಿತ್ತು.
ಆದರೆ ಸಂಜೆ 6.30ರ ನಂತರ ಮಳೆ ಮತ್ತೆ ರಭಸ ಪಡೆಯಿತು. ಮಧ್ಯಾಹ್ನ ಬೀಸಿದ ಗಾಳಿಯಿಂದಾಗಿ ಗೋಕುಲ ರಸ್ತೆ ಗ್ರೀನ್ ಗಾರ್ಡನ್ ಮುಂತಾದೆಡೆ ಮರಗಳು ನೆಲಕ್ಕುರುಳಿವೆ.
ಮಧ್ಯಾಹ್ನದಿಂದಲೇ ಮಳೆ ಕಣ್ಣು ಮುಚ್ಚಾಲೆ ಆಡುತ್ತಿದುದರಿಂದ ಬೀದಿ ವ್ಯಾಪಾರಸ್ಥರು ತರಾತುರಿಯಲ್ಲಿ ವ್ಯಾಪಾರ ಮೊಟಕುಗೊಳಿಸಿ, ಮನೆಯತ್ತ ಹೆಜ್ಜೆ ಹಾಕಿದರು. ನಿತ್ಯ ಸಂಜೆ ಶಾಪಿಂಗ್ಗಾಗಿ ನಗರದ ಪ್ರಮುಖ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿತು. ಅನೇಕ ದಿನಗಳಿಂದ ಹೆಚ್ಚುತ್ತಿದ್ದ ಬಿಸಿಲಿನ ತಾಪಕ್ಕೆ ಸೋಮವಾರ ಸುರಿದ ಮಳೆ ಒಂದಿಷ್ಟು ತಂಪೆರೆಯಿತು.
ಸುಮಾರು 40 ನಿಮಿಷ ಜೋರಾಗಿ ಸುರಿದ ಮಳೆ ಆಮೇಲೂ ಜಿಟಿಜಿಟಿ ಸುರಿಯುತ್ತಿತ್ತು. ಮಳೆ ಸುರಿಯುತ್ತಿದ್ದಂತೆಯೇ ರೈತಾಪಿ ವರ್ಗದ ಮುಖದಲ್ಲಿ ಹೊಸ ಕಳೆ ಕಂಡುಬಂದಿತು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯಲೆಂದು ಪ್ರಾರ್ಥಿಸಿದರು. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮಳೆ ಹೀಗೆಯೇ ಸುರಿದರೆ ನಿವಾರಣೆ ಆಗುವ ಲಕ್ಷಣವಿದೆ.
ಸಿಡಿಲು ಬಡಿದು ಓರ್ವ ಸಾವು
ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಸಿಡಿಲು ಗುಡುಗು ಸಹಿತ ಸುರಿದ ಭಾರಿ ಮಳೆಗೆ ತಾಲೂಕಿನ ಹಂಗರಕಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಸಿಡಿಲು ಬಡಿದು ಮೃತಪಟ್ಟರೆ, ವರವನಾಗಲಾವಿಯಲ್ಲಿ ಆಕಳುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ವೀರಪ್ಪ ನಿಂಗಪ್ಪ ರಾಮಣ್ಣವರ(40) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ವೀರಪ್ಪ ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಕುರಿ ಕಾಯಲು ತೆರಳಿದ್ದನು. ಸಂಜೆಯಾಗುತ್ತಿದ್ದಂತೆಯೇ ಗುಡುಗು ಸಿಡಿಲು ಸಹಿತ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ಗ್ರಾಮದ ಶಾಲೆಯ ಹಿಂಬದಿಯ ಶೆಡ್ವೊಂದರಲ್ಲಿ ನಿಂತಿದ್ದರು. ಇದೇ ಸಂದರ್ಭದಲ್ಲಿ ಸಿಡಿಲು ಬಡಿದಿದ್ದು, ಸ್ಥಳದಲ್ಲಿಯೇ ವೀರಪ್ಪ ಸುಟ್ಟು ಕರಕಲಾಗಿದ್ದಾನೆ. ಉಳಿದ ಮೂವರಾದ ನಾಗಪ್ಪ ಈರಪ್ಪ ಇಟಿ, ರಾಜು ಶಂಕ್ರೆಪ್ಪ ಬಡವಣ್ಣವರ, ಮಲ್ಲಿಕಾರ್ಜುನ ಕಾಡಣ್ಣವರ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಳು ಸಾವು: ಅದೇ ರೀತಿಯಾಗಿ ತಾಲೂಕಿನ ವರವನಾಗಲಾವಿಯಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟ ಘಟನೆ ನಡೆದಿದೆ. ಶಹನೂರ ಅಹಮ್ಮದ ಶೇಖಸನದಿ ಎಂಬುವವರಿಗೆ ಸಂಬಂಧಿಸಿದ ಆಕಳು ಮೃತಪಟ್ಟಿದ್ದು ಎಂದು ತಿಳಿದು ಬಂದಿದೆ. ಮನೆಯ ಹತ್ತಿರದ ನೀಲಗಿರಿ ಗಿಡಕ್ಕೆ ಆಕಳವನ್ನು ಕಟ್ಟಲಾಗಿತ್ತು. ಸಂಜೆ ಗುಡುಗು ಸಿಡಿಲು ಸಹಿತ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ ಎಂದು ಶಹನೂರ ಅಹಮ್ಮದ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.