ದ್ವಿಪಕ್ಷೀಯ ಸಂಬಂಧಕ್ಕೆ ವ್ಯಾಪಾರವೇ ಬುನಾದಿ: ಜೆನ್ನಿಫರ್
ಕ.ಪ್ರ.ವಾರ್ತೆ , ಹುಬ್ಬಳ್ಳಿ , ಮೇ 21
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಿ ವ್ಯಾಪಾರ ಪ್ರಮುಖ ಸಂಗತಿಯಾಗಿದ್ದು, ಭವಿಷ್ಯತ್ತಿನಲ್ಲಿ ಉಭಯ ದೇಶಗಳ ನಡುವೆ ನಡೆಯುತ್ತಿರುವ ವ್ಯಾಪಾರ ವಹಿವಾಟು 100 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ ಎಂದು ಅಮೆರಿಕನ್ ಕಾನ್ಸ್ಯೂಲ್ ಜನರಲ್ ಜೆನ್ನಿಫರ್ ಮ್ಯಾಕಿನ್ಟೈರ್ ಹೇಳಿದರು.
ಮಂಗಳವಾರ ಹುಬ್ಬಳ್ಳಿಯಲ್ಲಿ ದಿ ಇಂಡಸ್ ಎಂಟರ್ಪ್ರೈನರ್, ದೇಶಪಾಂಡೆ ಫೌಂಡೇಷನ್ ಮತ್ತು ಅಮೆರಿಕದ ವಾಣಿಜ್ಯ ಸೇವೆಗಳ ಪ್ರಾಧಿಕಾರ ಮತ್ತು ಇಂಡೋ ಅಮೆರಿಕನ್ ಛೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ 'ಅಮೆರಿಕದೊಂದಿಗೆ ವ್ಯಾಪಾರ ವಹಿವಾಟು' ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಮೆರಿಕ ಸ್ವತಂತ್ರಗೊಂಡ ವರ್ಷದಿಂದಲೇ ಭಾರತದೊಂದಿಗೆ ವ್ಯವಹಾರಿಕ ಸಂಬಂಧಗಳು ಆರಂಭಿಸಿದೆ. 200 ವರ್ಷಗಳ ಅವಧಿಯಲ್ಲಿ ಅಮೆರಿಕ ಮತ್ತು ಅಮೆರಿಕದ ನಾಗರಿಕರು ಭಾರತ-ಅಮೆರಿಕ ಪಾಲುದಾರಿಕೆ ಮಹತ್ವ ಅರಿತಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ ಎರಡು ದೇಶಗಳ ಮಧ್ಯೆ ಸರಕು ಸಾಮಗ್ರಿ ಮತ್ತು ಸೇವಾ ವಲಯದಲ್ಲಿ ವಹಿವಾಟು ನಾಲ್ಕೂವರೆ ಪಟ್ಟು ಏರಿಕೆಯಾಗಿದ್ದು, ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಶೀಘ್ರದಲ್ಲಿ ನೂರು ಬಿಲಿಯನ್ ಡಾಲರ್ ತಲುಪಲಿದೆ. ಭಾರತಕ್ಕೆ ಅಮೆರಿಕದ ರಫ್ತು ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದ್ದರೆ, ಭಾರತದ ರಫ್ತು ಪ್ರಮಾಣ ಶೇ.180ರ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದರು. ಬಹುತೇಕ ಯುವ ಜನಾಂಗವನ್ನು ಹೊಂದಿರುವ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತಕ್ಕೆ ಅಮೆರಿಕ ಮೂಲದ ಕಂಪನಿಗಳು ನೆಲೆ ಕಂಡುಕೊಳ್ಳುವುದರೊಂದಿಗೆ ಇಲ್ಲಿನ ಪ್ರತಿಭಾವಂತ ಎಂಜಿನಿಯರ್ ಮತ್ತು ಎಂಬಿಎ ಪದವೀಧರರಿಗೆ ಉದ್ಯೋಗಾವಕಾಶ ಒದಗಿಸುತ್ತಿವೆ ಎಂದು ಹೇಳಿದರು.