25, 26ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 22
ಇಲ್ಲಿನ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಮೇ 25 ಹಾಗೂ 26ರಂದು 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಇದುವರೆಗೆ ನಡೆದ ಏಳು ಸಮ್ಮೇಳನಗಳಲ್ಲಿ ಪುರುಷರೇ ಅಧ್ಯಕ್ಷರಾಗಿದ್ದು, ಪ್ರಥಮ ಬಾರಿಗೆ ಮಹಿಳಾ ಸಾಹಿತಿ ಡಾ. ಸರೋಜಿನಿ ಶಿಂತ್ರಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಲಾಗಿದೆ. ವಿಶೇಷ ಎಂದರೆ ಈ ಬಾರಿ ಸಮ್ಮೇಳನದ ವಿಶೇಷ ಮೆರವಣಿಗೆ ಇರುವುದಿಲ್ಲ ಎಂದರು.
ಮೇ 25ರ ಬೆಳಗ್ಗೆ 10ಕ್ಕೆ ಚಿಂತಕ ಡಾ. ರಾಜೇಂದ್ರ ಚನ್ನಿ ಸಮ್ಮೇಳನ ಉದ್ಘಾಟಿಸುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಆಶಯ ನುಡಿ ಹೇಳಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ ಹಾಗೂ ನಿಕಟಪೂರ್ವ ಅಧ್ಯಕ್ಷರ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಭಾಗವಹಿಸುತ್ತಾರೆ. ನಂತರ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರು ಮನೋಗತ, ಮೂಲಭೂತ ಸೌಕರ್ಯ ಮತ್ತು ವಾರ್ತಾ ಸಚಿವ ಸಂತೋಷ ಲಾಡ್ ತುಡಿತ-ಮಿಡಿತ, ಬಸವರಾಜ ಹೊರಟ್ಟಿ ತೇರು ಸಾಗುವ ದಾರಿ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರು ತೆರೆದ ಪುಟ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸುತ್ತಾರೆ ಎಂದರು.
2ನೇ ದಿನ: 25ರ ಮಧ್ಯಾಹ್ನ 2ಕ್ಕೆ ಧರ್ಮನಿರಪೇಕ್ಷತೆ-ಅಭಿವ್ಯಕ್ತಿ ಸ್ವಾತಂತ್ರ್ಯ ವಿಷಯ ಕುರಿತ 1ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಚಿಂತಕ ಬಿ.ಎಸ್. ಸೊಪ್ಪಿನ ವಹಿಸುತ್ತಾರೆ. ಧರ್ಮ ನಿರಪೇಕ್ಷತೆ ಕುರಿತು ಗುಲ್ಬರ್ಗಾದ ಡಾ. ಕೆ. ನೀಲಾ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಗುಲ್ಬರ್ಗಾದ ಡಾ. ಮೀನಾಕ್ಷಿ ಬಾಳಿ ಮಾತನಾಡುತ್ತಾರೆ. ನಾನು ಮತ್ತು ಧಾರವಾಡ ಎನ್ನುವ ವಿಷಯದ ಕುರಿತು ನಡೆಯುವ 2ನೇ ಗೋಷ್ಠಿಯಲ್ಲಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸುತ್ತಾರೆ. ಬರಹಗಾರರಾಗಿ ಡಾ. ಎನ್. ಜಗದೀಶ ಕೊಪ್ಪ, ಸಾಮಾಜಿಕ ಚಳವಳಿಗಾರರಾಗಿ ಡಾ. ಸಿದ್ದನಗೌಡ ಪಾಟೀಲ, ರಂಗಭೂಮಿ ಕಲಾವಿದರಾಗಿ ಡಾ. ಪ್ರಕಾಶ ಗರುಡ, ಚಿತ್ರಕಲಾವಿದರಾಗಿ ಬಿ. ಮಾರುತಿ ಹಾಗೂ ಕಾರ್ಮಿಕ ಸಂಘಟಿಕರಾಗಿ ಎಂ.ಬಿ. ಕಟ್ಟಿ ತಮ್ಮ ಅನುಭವಗಳನ್ನು ಬಿಚ್ಚಿಡುತ್ತಾರೆ. ಸಂಜೆ 5ಕ್ಕೆ ಕವಿಗೋಷ್ಠಿ ನಡೆಯಲಿದ್ದು, ನರಸಿಂಹ ಪರಾಂಜಪೆ, ವಿಜಯಕಾಂತ ಪಾಟೀಲ, ಡಾ. ಪ್ರಜ್ಞಾ ಮತ್ತಿಹಳ್ಳಿ, ಟಿ.ಎಸ್. ಗೊರವರ, ಗುರುಮೂರ್ತಿ ಯರಗಂಬಳಿಮಠ ಸೇರಿದಂತೆ 40 ಜನ ಕವಿತೆ ವಾಚನ ಮಾಡಲಿದ್ದಾರೆ. ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುತ್ತಾರೆ. ಮೈಸೂರಿನ ಜಿ.ಕೆ. ರವೀಂದ್ರಕುಮಾರ ಆಶಯ ನುಡಿ ಹೇಳಲಿದ್ದಾರೆ. ಸಂಜೆ 7.30ರಿಂದ ಕುಂದಗೋಳದ ಶಂಬಯ್ಯ ಹಿರೇಮಠ, ನವಲಗುಂದದ ಇಮಾಮಸಾಬ ವಲ್ಲೆಪ್ಪನವರ ಹಾಗೂ ಶಲವಡಿಯ ಸತೀಶ ಶಿವಪ್ಪಯ್ಯನಮಠ, ಗುರುಶಾಂತೇಶ್ವರ ಯುವಕ ಸಂಘ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮೇ 26ರಂದು ಬೆಳಗ್ಗೆ 9.30ಕ್ಕೆ ಜಾಗತೀಕರಣ ಮತ್ತು ಕನ್ನಡ ಸಾಹಿತ್ಯ ಕುರಿತ ಗೋಷ್ಠಿ ನಡೆಯಲಿದೆ. ಡಾ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸುತ್ತಾರೆ. ಡಾ. ರಂಗರಾಜ ವನದುರ್ಗ ಸಂಸ್ಕೃತಿ ಚಿಂತನೆ, ಜಗದೀಶ ಮಂಗಳೂರಮಠ ಅವರು ಕಾವ್ಯ, ಡಾ. ಪ್ರಹ್ಲಾದ ಅಗಸನಕಟ್ಟೆ ಕತೆ ಮತ್ತು ಕಾದಂಬರಿ ಕುರಿತು ಮಾತನಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಮಹಿಳೆ-ಸಮಕಾಲೀನ ಬಿಕ್ಕಟ್ಟುಗಳು ಎಂಬ 4ನೇ ಗೋಷ್ಠಿಯಲ್ಲಿ ಡಾ. ಶಾಂತಾ ಇಮ್ರಾಪುರ ಅಧ್ಯಕ್ಷತೆ ವಹಿಸುತ್ತಾರೆ. ಮಹಿಳಾ ದೌರ್ಜನ್ಯದ ನೆಲೆಗಳು, ಮಹಿಳಾ ಸಾಹಿತ್ಯದ ನೆಲೆಗಳು ಹಾಗೂ ಮಹಿಳೆ ಮತ್ತು ಕಾನೂನು ಕುರಿತು ಡಾ. ಜಯಶ್ರೀರಾವ್, ಡಾ. ವಿನಯಾ ವಕ್ಕುಂದ, ಪ್ರಫುಲ್ಲಾ ನಾಯಕ ಮಾತನಾಡಲಿದ್ದಾರೆ. 5ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ವಿಜಯಕುಮಾರ ಕಟಗಿಹಳ್ಳಿಮಠ ವಹಿಸುತ್ತಾರೆ. ಡಾ. ಸರೋಜಿನಿ ಶಿಂತ್ರಿ ಅವರ ಬದುಕು ಕುರಿತು ಡಾ. ಶೋಭಾ ಹಿತ್ತಲಮನಿ, ಡಾ. ಭಾರತಿ ಹಿರೇಮಠ ಹಾಗೂ ಅವರ ಬರಹ ಕುರಿತು ಡಾ. ಬಸವರಾಜ ಡೋಣೂರ ಮಾತನಾಡಲಿದ್ದಾರೆ.
ಸಮಾರೋಪ: ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಸಮಾರೋಪ ಭಾಷಣ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಡಾ. ಎಚ್.ಬಿ. ವಾಲೀಕಾರ ಮತ್ತಿತರರು ಭಾಗವಹಿಸುತ್ತಾರೆ ಎಂದು ಡಾ. ಲಿಂಗರಾಜ ಅಂಗಡಿ ಹೇಳಿದರು. ಸಾಹಿತಿ ಮೋಹನ ನಾಗಮ್ಮನವರ, ಗೌರವ ಕಾರ್ಯದರ್ಶಿ ಅನಿಲ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.