ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಣು ಹೊಣೆಗಾರಿಕೆ ಮಸೂದೆ ಭಾರತಕ್ಕೆ ಹೊಸತು

Rashmi Kasaragodu
Updated On : 23 May 2013, 11:55 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 22
ನಾಗರಿಕ ಅಣು ಹೊಣೆಗಾರಿಕೆ ಮಸೂದೆ ಭಾರತೀಯ ಕಾನೂನು ಕ್ಷೇತ್ರಕ್ಕೆ ಹೊಸತು ಮತ್ತು ಅಷ್ಟೇ ಸೂಕ್ಷ್ಮವಾಗಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಎಸ್. ರಾಜೇಂದ್ರಬಾಬು ಹೇಳಿದರು.
ಬುಧವಾರ, ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಣು ಹೊಣೆಗಾರಿಕೆ, ವಿಮೆ ಮತ್ತು ವಿವಾದ ಪರಿಹಾರ ಕುರಿತು ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಣು ವಿದ್ಯುತ್ ಶಕ್ತಿಯಾಗಲಿ ಯಾವುದೇ ಶಕ್ತಿಯನ್ನು ಒಳ್ಳೆಯದಕ್ಕೆ ಮತ್ತು ಕೆಟ್ಟದ್ದಕ್ಕೆ ಬಳಸಲು ಸಾಧ್ಯ. ಭಾರತ ಅಣು ಶಕ್ತಿಯನ್ನು ಆರ್ಥಿಕಾಭಿವೃದ್ಧಿಗೆ ಬಳಕೆಗೆ ಚಿಂತನೆ ಮಾಡಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಭಾರತ ತನ್ನ ಅಣು ಶಕ್ತಿ ಉತ್ಪಾದನಾ ಘಟಕಗಳನ್ನು ನಾಗರಿಕ ಮತ್ತು ಮಿಲಿಟರಿ ಎಂದು ವರ್ಗೀಕರಿಸಿ ನಾಗರಿಕ ಅಣು ಶಕ್ತಿ ಉತ್ಪಾದನಾ ಕ್ಷೇತ್ರವನ್ನು ಶಕ್ತಿ ಸಂಪನ್ಮೂಲ ಉತ್ಪಾದನೆಗೆ ಮೀಸಲಿರಿಸಿದೆ. ಆದರೆ, ಇತ್ತೀಚೆಗೆ ಸಂಭವಿಸಿದ ಪುಕುಷಿಮಾ ರಿಯಾಕ್ಟರ್ ಅವಘಡದಿಂದಾಗಿ ಇಡೀ ಜಗತ್ತು ಅಣು ವಿದ್ಯುತ್ ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಎದುರಾಗುವ ಅಪಾಯಗಳ ಕುರಿತು ಚಿಂತನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲಿ ಹೊಸ ಚಿಂತನೆ ನಡೆದಿದೆ. ನಾಗರಿಕ ಅಣು ಹೊಣೆಗಾರಿಕೆ ಮಸೂದೆ ಜಾರಿಯಿಂದ ಸಂತ್ರಸ್ತರಿಗೆ ಅನುಕೂಲವಾಗುತ್ತಿದ್ದು, ಸಂತ್ರಸ್ತರು ತಮ್ಮ ವಾದ ಮಂಡಿಸದೇ ಅಥವಾ ಹಕ್ಕು ಸ್ಥಾಪಿಸದೇ ನಿಗದಿತ ಕಾಲಾವಧಿಯಲ್ಲಿ ಪರಿಹಾರ ಪಡೆಯುವುದಕ್ಕೆ ಅನುಕೂಲ. ಅಣು ಹಾನಿಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಲು ಪ್ರತ್ಯೇಕ ನ್ಯಾಯಾಲಯ ಇಲ್ಲವೇ ನ್ಯಾಯಾಧೀಕರಣ ಸ್ಥಾಪಿಸಿ ಪರಿಹಾರ ವಿತರಣೆಗೆ ನಾಗರಿಕ ಅಣು ಹೊಣೆಗಾರಿಕೆ ಮಸೂದೆಯಲ್ಲಿ ಅವಕಾಶವಿದೆ ಎಂದರು.
ಕೇಂದ್ರ ಅಣುಶಕ್ತಿ ಇಲಾಖೆ ಕಾನೂನು ಸಲಹೆಗಾರ ಜೀತೆಂದ್ರ ಕುಮಾರ್ ಅವರು, ಭಾರತ ವಿದ್ಯುತ್ ಶಕ್ತಿಯನ್ನು ಶೇ. 39ರಷ್ಟು ಕಲ್ಲಿದ್ದಲಿನಿಂದ, ಶೇ.16ರಷ್ಟು ಜಲವಿದ್ಯುಚ್ಛಕ್ತಿಯಿಂದ ಮತ್ತು ಶೇ. 17ರಷ್ಟು ವಿದ್ಯುಚ್ಛಕ್ತಿಯನ್ನು ಅಣುಶಕ್ತಿಯಿಂದ ಪಡೆದುಕೊಳ್ಳುತ್ತದೆ. 2050ರ ಹೊತ್ತಿಗೆ ಭಾರತ ಶೇ. 25ರಷ್ಟು ವಿದ್ಯುತ್ನ್ನು ಅಣುಶಕ್ತಿಮೂಲಕ ಪಡೆದುಕೊಳ್ಳಲು ಕಾರ್ಯಕ್ರಮ ರೂಪಿಸಿದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಡಾ. ಟಿ.ಆರ್. ಸುಬ್ರಮಣ್ಯ, ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ಎಲ್ಲ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.
ಕಾನೂನು ವಿವಿ ರಿಜಿಸ್ಟ್ರಾರ್ ಸುಭಾಷ ಮಲಖೇಡೆ, ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಡಾ. ಬಿ.ಎಸ್. ರೆಡ್ಡಿ, ಜಿಐಸಿ ಆಫ್ ಇಂಡಿಯಾ ಉಪಮಹಾಪ್ರಬಂಧಕ ವೈ. ರಾಮುಲು ಮತ್ತು ಡಾ. ಸಂದೀಪ್ ಭಟ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement