ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪ್ರತಿಷ್ಠಿತ ಶಾಲೆಯಲ್ಲಿ ದುಡ್ಡಿದ್ದವರಿಗೆ ಸೀಟು

Rashmi Kasaragodu
Updated On : 23 May 2013, 11:55 am

ಧಾರವಾಡ: ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನು ಸಾಕಷ್ಟು ಸಮಯ ಬಾಕಿ ಇರುವಾಗಲೇ ಧಾರವಾಡ ನಗರದ ಎಲ್ಲ ಬಹುತೇಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಪ್ರವೇಶಾತಿ ಮುಗಿದಿದೆ ಎಂಬ ಸಿದ್ಧ ಉತ್ತರ ದೊರಕುತ್ತಿದೆ.
ಹೇಗಾದರೂ ಮಾಡಿ ತಮ್ಮ ಮಗ/ಮಗಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಬೇಕೆಂಬ ಶತಾಯಗತಾಯ ಪ್ರಯತ್ನ ಪಾಲಕರು ಮಾಡುತ್ತಿದ್ದಾರೆ. ಪ್ರವೇಶಕ್ಕಾಗಿ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಅಲೆದಾಡುವ ಪಾಲಕರಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಲೆನೋವಿನ ಸಂಗತಿಯಾಗಿದೆ.
ಪ್ರವೇಶಾತಿ ಮುಗಿದಿದೆ ಎಂಬ ಸಿದ್ಧ ಉತ್ತರದ ನಂತರವೂ ಪ್ರವೇಶಾತಿ ಬೇಕೆ ಎನ್ನುವುದಾದರೆ, ಪಾಲಕರ ಬಳಿ ಆಡಳಿತ ಮಂಡಳಿ ಕೇಳುವಷ್ಟು ಹಣ ಇರಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ವಸೂಲಿ(ಶಿಪಾರಸ್ಸು) ಬೇಕು. ವಸೂಲಿ ಇದ್ದರೂ ಕೂಡಾ ಡೋನೆಷನ್ ಕೊಡುವುದು ತಪ್ಪುವುದಿಲ್ಲ. ಒಂದೆಡೆ ಪ್ರತಿ ಮಗುವಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತಿದ್ದರೆ, ಇನ್ನೊಂದೆಡೆ ಶಿಕ್ಷಣವನ್ನೇ ವ್ಯಾಪಾರವನ್ನಾಗಿ ಮಾಡಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ದುಡ್ಡು ಕೀಳುವುದನ್ನೇ ಮುಖ್ಯ ಉದ್ದೇಶವಾಗಿಸಿಕೊಂಡಿವೆ.
ಹೌಹಾರುವ ಸ್ಥಿತಿ: ವಿವಿಧ ತರಗತಿಗಳ ಪ್ರವೇಶಾತಿ ಕುರಿತಂತೆ ಇಲ್ಲಿನ ಪ್ರತಿಷ್ಠಿತ ಶಾಲೆಗಳು ಸಾರ್ವಜನಿಕರಿಗೆ ಮುಕ್ತ ಮಾಹಿತಿ ನೀಡುವುದಿಲ್ಲ. ಯಾವಾಗ ಪ್ರವೇಶ ಆರಂಭವಾಗುತ್ತದೆ, ಅರ್ಜಿ ವಿತರಣೆ, ಲಭ್ಯ ಸೀಟುಗಳು, ಪ್ರವೇಶ ಶುಲ್ಕ ಇತರೆ ಮಾಹಿತಿಗಳು ಕೇಳಿದರೂ ಸಿಗಲ್ಲ. ಪ್ರವೇಶ ಸಿಕ್ಕರೆ ಮಾತ್ರ ಉಳಿದ ವಿವರ ಹೇಳುವುದಾಗಿ ಆಯಾ ಶಾಲೆಯ ಸಿಬ್ಬಂದಿ ಉತ್ತರ. ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಕೇಳಿದರಂತೂ ಹೌಹಾರುವ ಸ್ಥಿತಿ. ಒಂದೊಂದು ಶಾಲೆಗಳು ಒಂದೊಂದು ರೀತಿಯ ಶುಲ್ಕ. ಎಲ್ಕೆಜಿ, ಯುಕೆಜಿ ಹಾಗೂ 1ನೇ ವರ್ಗದ ಮಕ್ಕಳಿಗೆ ಹತ್ತಾರು ಸಾವಿರ ರುಪಾಯಿ ಬೇಡಿಕೆ ಇದ್ದು, ಶಾಲೆಗಳು ಕೇಳಿದಷ್ಟು ಹಣ ಕಟ್ಟಿದರೆ ಪ್ರವೇಶ ಇಲ್ಲದಿದ್ದರೆ ಸರ್ಕಾರಿ ಶಾಲೆಯೇ ಗತಿ.
ಇತ್ತೀಚೆಗೆ ಇಂಗ್ಲೀಷ ಮಾದ್ಯಮ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಸಾವಿರಾರು ರುಪಾಯಿ ಕೊಟ್ಟರೂ ಚಿಂತೆಯಿಲ್ಲ. ಇಂಗ್ಲೀಷ ಮಾಧ್ಯಮ ಶಾಲೆಯೇ ಬಡ ಪಾಲಕರಿಗೂ ಅನಿವಾರ್ಯವಾಗಿ ಬೇಕಾಗಿದೆ. ಪಾಲಕರ ಈ ಮನಸ್ಥಿತಿಯನ್ನು ಬಂಡವಾಳವಾಗಿಸಿಕೊಂಡ ಆಡಳಿತ ಮಂಡಳಿಗಳು ಸಾಧ್ಯವಾದಷ್ಟು ಹಣ ಕೀಳುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಅಂತ್ಯ ಹಾಡಲು ಸರ್ಕಾರ ಮಾಡಿದ ಪ್ರಯತ್ನ ಸಹ ಯಾವ ಫಲ ನೀಡುತ್ತಿಲ್ಲ. ಅಲ್ಲದೇ, ಪ್ರತಿ ವರ್ಷ ಎಲ್ಲ ಖಾಸಗಿ ಶಾಲೆಗಳು ಕೆಲವು ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಶಾಲೆಗಳಲ್ಲಿ ಮಕ್ಕಳ ಪ್ರವೇಶ ದೊರಕುತ್ತಿದ್ದಂತೆಯೇ ಚೀಟಿ ಕೊಟ್ಟು ಇದೇ ವ್ಯಾಪಾರಿಯಿಂದ ಬಟ್ಟೆ, ಬೂಟು, ಸಾಕ್ಸು ಹಾಗೂ ಇನ್ನಿತರೆ ವಸ್ತುಗಳನ್ನು ಖರೀದಿಸುವಂತೆ ಒತ್ತಾಯಿಸಲಾಗುತ್ತದೆ. ಆ ವ್ಯಾಪಾರಿ ಇದ್ದ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಾನೆ. ಈ ಕುರಿತು ಪಾಲಕರು ಚಕಾರ ಎತ್ತಿದರೆ ಶಾಲೆಗಳಿಗೆ ಕಮೀಷನ್ ಕೊಡಬೇಕೆಂದು ನೇರವಾಗಿಯೇ ಉತ್ತರಿಸುತ್ತಾರೆ ವ್ಯಾಪಾರಿಗಳು.
ಸೇವೆ ರೂಪದಲ್ಲಿ ಶಿಕ್ಷಣ ಒದಗಿಸಬೇಕಿದ್ದ ಶಿಕ್ಷಣ ಸಂಸ್ಥೆಗಳು ಉದ್ದಿಮೆಯಾಗಿದ್ದು, ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರವನ್ನು ತಪ್ಪಿಸಲು ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ. ಇದಕ್ಕಿಂತ ಹೆಚ್ಚಾಗಿ ಪಾಲಕರು ದುಬಾರಿ ಶುಲ್ಕ ಕುರಿತಂತೆ ಎಚ್ಚರಗೊಂಡು ಪ್ರತಿಭಟನೆ ಹಾದಿ ಹಿಡಿದರೂ ತಪ್ಪಲ್ಲ.



ದೂರು ಬಂದರೆ ಕ್ರಮ  
ಖಾಸಗಿ ಶಾಲೆಗಳಿಗೆ ಮಕ್ಕಳ ಪ್ರವೇಶಾತಿ, ಪ್ರವೇಶ ಶುಲ್ಕ, ಡೋನೆಷನ್ ಸೇರಿದಂತೆ ಅವುಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಒಂದು ಪ್ರಾಧಿಕಾರ ರಚಿಸಿದೆ. ಆಯಾ ವರ್ಗದ ಮಕ್ಕಳು, ಶಿಕ್ಷಕರು ಹಾಗೂ ಶಾಲೆಯಲ್ಲಿನ ಸೌಲಭ್ಯಗಳ ಕುರಿತಂತೆ ಒಟ್ಟಾರೆ ಗಮನದಲ್ಲಿಟ್ಟುಕೊಂಡು ಈ ತರಗತಿಗೆ ಇಷ್ಟು ಪ್ರವೇಶ ಶುಲ್ಕ, ಡೋನೆಷನ್ ನಿಗದಿಪಡಿಸಲಾಗುತ್ತದೆ. ನಿಗದಿಪಡಿಸಿದ ಶುಲ್ಕವನ್ನೇ ಪಾಲಕರಿಂದ ಪಡೆದುಕೊಳ್ಳಬೇಕು. ಅಷ್ಟೇ ಅಲ್ಲ, ಆಯಾ ಶಾಲೆಗಳು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ಸಹ ಸಲ್ಲಿಸಬೇಕು. ಖಾಸಗಿ ಶಾಲೆಗಳು ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡಿದ್ದು ಕಂಡು ಬಂದರೆ ಅಂತಹ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಪಾಲಕರು ಜಾಗ್ರತರಾಗಿ, ಯಾವುದೇ ಶಾಲೆ ಇರಲಿ ತಮ್ಮ ಮಗುವಿನ ಪ್ರವೇಶಕ್ಕೆ ಹೆಚ್ಚು ಶುಲ್ಕ ಪಡೆದರೆ ಆ ಕುರಿತು ದೂರು ನೀಡಬಹುದು.
- ಡಾ.ಬಿ.ಕೆ.ಎಸ್. ವರ್ಧನ್
ಶಿಕ್ಷಣ ಇಲಾಖೆ, ಉಪ ನಿರ್ದೇಶಕರು
ಧಾರವಾಡ   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement