ಬರಗಾಲ ಛಾಯೆಯಲ್ಲಿ ಮುಂಗಾರು ಆಗಮನ
ಧಾರವಾಡ: 2 ವರ್ಷ ನಿರಂತರ ಬರಗಾಲದಿಂದ ತತ್ತರಿಸಿದ ಜಿಲ್ಲೆಯ ರೈತರು ಇದೀಗ ಮತ್ತೊಂದು ಮುಂಗಾರು ಹಂಗಾಮಿಗೆ ಸಿದ್ಧರಾಗುತ್ತಿದ್ದಾರೆ.
ಇತ್ತೀಚೆಗೆ ಜಿಲ್ಲಾದ್ಯಂತ ಬಿದ್ದ ಉತ್ತಮ ಮಳೆಯಿಂದ ರೈತರ ಮೊಗದಲ್ಲಿ ತುಸು ನಗು ಕಂಡಿದ್ದು, ಇನ್ನೊಂದು ಮಳೆಯಾದರೆ ಸಾಕು ಮುಂಗಾರು ಬಿತ್ತನೆಗೆ ತುದಿಗಾಲಿನಲ್ಲಿದ್ದಾರೆ. ಅಂತೆಯೇ, ಕೃಷಿ ಇಲಾಖೆಯೂ ಸಹ ಮುಂಗಾರು ಬಿತ್ತನೆಗೆ ರೈತರಿಗೆ ಅಗತ್ಯವಾದ ಬೀಜ ಹಾಗೂ ಗೊಬ್ಬರದ ಸಂಗ್ರಹಣೆ ಮಾಡಿಕೊಂಡಿದೆ.
ಕಳೆದ ಬಾರಿ ಕೃಷಿ ಇಲಾಖೆ ಹಾಕಿದ ಬಿತ್ತನೆ ಪ್ರದೇಶದ ಲೆಕ್ಕಾಚಾರವನ್ನು ಬರಗಾಲ ತಲೆಕೆಳಗಾಗಿಸಿತ್ತು. ಅಂದರೆ, ಆ ವರ್ಷ ಕೃಷಿ ಇಲಾಖೆಯು ಜಿಲ್ಲೆಯಲ್ಲಿ 2.80 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿತ್ತು. ಆದರೆ, ಮಳೆ ಪ್ರಮಾಣದ ಕೊರತೆಯಿಂದ ಬಿತ್ತನೆಯಾಗಿದ್ದು ಕೇವಲ 1.28 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ. ಆದರೆ, ಈ ಬಾರಿ ಮುಂಗಾರು ಉತ್ತಮವಾಗಿ ಬೀಳುವ ಸಾಧ್ಯತೆಗಳಿದ್ದು, ಇಲಾಖೆಯು 2.89 ಹೆಕ್ಟೆರ್ ಪ್ರದೇಶ ಬಿತ್ತನೆ ಗುರಿ ಹೊಂದಿದೆ. ಅದರಂತೆ ಮುಂಗಾರು ಬಿತ್ತನೆಗೆ ಬೇಕಾದ ಬೀಜ ಹಾಗೂ ಲವಣಾಂಶಯುಕ್ತ ಗೊಬ್ಬರದ ಹಂಚಿಕೆಗೆ ಅವಶ್ಯಕ ವ್ಯವಸ್ಥೆ ಸಹ ಮಾಡಿಕೊಂಡಿದೆ.
ಮುಂಗಾರಿನ ಪ್ರಮುಖ ಬೆಳೆಗಳಾದ ಶೇಂಗಾ, ಹೆಸರು, ಮೆಕ್ಕೆಜೋಳ, ಸೋಯಾಬಿನ್, ಭತ್ತ ಹಾಗೂ ಹತ್ತಿ ಬಿತ್ತನೆಗೆ ಕೃಷಿ ಇಲಾಖೆ ಪ್ರಸ್ತುತ ಬಿತ್ತನೆಗೆ ಅವಶ್ಯಕ ಬೀಜದ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೇ, ಪ್ರತಿ ನಿತ್ಯ ಬೀಜ ಸಂಗ್ರಹಣೆ ಏರಿಕೆಯಾಗುತ್ತಿದೆ. ಆದರೆ, ಮುಂಗಾರು ಬಿತ್ತನೆ ಆರಂಭವಾಗದ ಹಿನ್ನೆಲೆಯಲ್ಲಿ ಇನ್ನು ಬೀಜಗಳ ಖರೀದಿ ಹೇಳಿಕೊಳ್ಳುವಷ್ಟು ಪ್ರಮಾಣದಲ್ಲಿ ಶುರುವಾಗಿಲ್ಲ. ಇಲಾಖೆ ಮಾತ್ರ ಬೀಜ ವಿತರಣೆ ಕಾರ್ಯಕ್ಕೆ ಪೂರ್ಣ ಪ್ರಮಾಣದ ಸಿದ್ಧತೆಯಲ್ಲಿದ್ದು, ಎಲ್ಲ ಬೀಜ ವಿತರಣಾ ಕೇಂದ್ರಗಳಿಗೆ ಈಗಾಗಲೇ ರೈತರಿಗೆ ಅವಶ್ಯಕ ಬೀಜ ಪೂರೈಸಿದೆ ಎನ್ನುತ್ತಾರೆ ಕೃಷಿ ಇಲಾಖೆ ಪ್ರಭಾರಿ ಜಂಟಿ ನಿರ್ದೇಶಕ ಶಬಾನಾ ಶೇಖ್.
ಅಲ್ಲದೇ, ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಜಿಲ್ಲೆಯ 14 ಹೋಬಳಿಗಳಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ, ಹೆಚ್ಚುವರಿಯಾಗಿ ಜಿಲ್ಲೆಯ ಪ್ರಮುಖ 14 ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆದು ರೈತರಿಗೆ ಬೀಜ ಖರೀದಿಗೆ ಅನುಕೂಲ ಮಾಡಿಕೊಡುವ ಚಿಂತನೆ ನಡೆದಿದೆ. ಹೆಚ್ಚುವರಿಯಾಗಿ ತೆರೆದ ಕೇಂದ್ರಗಳಿಗೆ ಇಲಾಖೆ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದ್ದು, ರೈತ ಅನುವುದಾರರನ್ನು ಅವರಿಗೆ ಸಹಾಯಕರನ್ನಾಗಿ ನೀಡಿದೆ ಎಂದು ಶಬಾನಾ ಶೇಖ್ ಕನ್ನಡಪ್ರಭಕ್ಕೆ ತಿಳಿಸಿದರು.
ಈಗಾಗಲೇ ಇಲಾಖೆ ಎಲ್ಲ ಬಿತ್ತನೆ ಪ್ರದೇಶದ ನೀರಿಕ್ಷಣಾ ಪಟ್ಟಿ ತಯಾರಿಸಿದ್ದು, ಪ್ರಮುಖವಾಗಿ ಶೇಂಗಾ-29.100 ಹೆಕ್ಟೆರ್, ಮಕ್ಕೆಜೋಳ-42,900 ಹೆಕ್ಟೆರ್, ಹೆಸರು-25,075 ಹೆಕ್ಟೆರ್, ಸೋಯಾಬೀನ್-34,530 ಹೆಕ್ಟೆರ್, ಹತ್ತಿ- 36,100 ಹೆಕ್ಟೆರ್, ಭತ್ತ 27,600 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಲಿದೆ ಎಂದು ಇಲಾಖೆ ನಿರೀಕ್ಷೆ ಮಾಡಲಾಗಿದೆ. ಅಲ್ಲದೇ, ಪ್ರಸ್ತುತ ಬೀಜ ವಿತರಣೆಗೆ ಕೇಂದ್ರಗಳು ಸಜ್ಜಾಗಿದ್ದು, ಬಿತ್ತನೆ ಅವಶ್ಯಕ ಬೀಜ ಪೂರೈಸಲಾಗಿದೆ ಎಂದರು.
ಹವಾಮಾನ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದ್ದು, ಈಗಾಗಲೇ ಮೇ 20ರೊಳಗೆ ಜಿಲ್ಲೆಯಲ್ಲಿ 105 ಮಿ.ಮೀ ಮಳೆ ಆಗಬೇಕಿತ್ತು. ಆದರೆ, ಪ್ರಸ್ತುತ ಮಳೆಯಾಗಿದ್ದು 76.6 ಮಿ.ಮೀ ಮಾತ್ರ. ಹಾಗಾಗಿ ಬಿತ್ತನೆಗೆ ಬೇಕಾದಷ್ಟು ಮಳೆ ಇನ್ನು ಆಗದ ಕಾರಣದಿಂದ ಬೀಜ ಹಾಗೂ ರಸಗೊಬ್ಬರ ಖರೀದಿಗೆ ರೈತರು ಮುಂದಾಗಿಲ್ಲ. ಮುಂಗಾರು ಮಳೆ ಜೂನ್ನಲ್ಲಿ ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದ ರೈತರ ಬಿತ್ತನೆಗೆ ಸಾಕಾಗುವಷ್ಟು ಮಳೆಯಾಗಲಿಲ್ಲ. ಅಲ್ಲದೇ, ಮಳೆ ಬೀಳುವ ಮೊದಲೇ ಸಾಕಷ್ಟು ರೈತರು ಬೀಜ ಗೊಬ್ಬರದ ಸಂಗ್ರಹಣೆ ಮಾಡಿಕೊಂಡಿದ್ದರು. ಆದರೆ, ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಸಂಗ್ರಹ ಬೀಜ ಗೊಬ್ಬರಗಳ ಖರೀದಿ ವೆಚ್ಚ ಸುಮ್ಮನೆ ಮೈಮೇಲೆ ಎಳೆದುಕೊಂಡಂತಾಗಿತ್ತು. ರೈತರು ಈ ವರ್ಷ ಬಿತ್ತನೆಗೆ ಅವಶ್ಯಕ ಮಳೆ ಬಿದ್ದ ಮೇಲೆ ಬೀಜಗಳ ಖರೀದಿ ಮಾಡುವ ಅಪೇಕ್ಷೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಪ್ರತಿವರ್ಷದಂತೆ ಈ ವರ್ಷವೂ ಸರ್ಕಾರ ರೈತರಿಗೆ ಅನಕೂಲವಾಗುವ ದೃಷ್ಠಿಯಿಂದ ಸಬ್ಸಿಡಿ ದರದಲ್ಲಿ ಬೀಜಗಳನ್ನು ನೀಡುತ್ತಿದೆ. ಅಂತೆಯೇ, ಪ್ರತಿಯೊಂದು ಬೀಜದ ತಳಿಗಳ ಪ್ರಕಾರ ದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ತರಹದ ಬೀಜ, ಬೀಜದ ವಿಧಗಳಿಗೆ (ತಳಿ) ವಿಶೇಷ ಸಬ್ಸಿಡಿ ಸರ್ಕಾರ ನೀಡುತ್ತಿದೆ.
ಟ ಕಲ್ಮೇಶ ಪಟ್ಟಣದವರ