ಸಮಾಜವೇ ಪ್ರಯೋಗಾಲಯ
ಧಾರವಾಡ: ಸಮಾಜಶಾಸ್ತ್ರಜ್ಞರಿಗೆ ಇಡೀ ಸಮಾಜವೇ ಪ್ರಯೋಗಾಲಯ. ಅವರು ತುಂಬ ಜಾಗ್ರತರಾಗಿ ಸಮಾಜವನ್ನು ಅವಲೋಕಿಸಬೇಕೆಂದು ಕರ್ನಾಟಕ ವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ ಹೇಳಿದರು.
ಕರ್ನಾಟಕ ವಿವಿ ಸಮಾಜಶಾಸ್ತ್ರ ವಿಭಾಗ ಬುಧವಾರ ಏರ್ಪಡಿಸಿದ್ದ ವೃದ್ಧರ ಆರೋಗ್ಯ ಮತ್ತು ಪೌಷ್ಟಿಕತೆಯ ಸಮಸ್ಯೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಶಾಸ್ತ್ರ ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಅಧ್ಯಯನದ ಜೊತಗೆ ಸಮಾಜವನ್ನು ಅವಲೋಕಿಸುತ್ತಾ ಕಲಿಯಬೇಕಿರುವುದು ಸಾಕಷ್ಟಿದೆ ಎಂದರು.
ಕೇರಳ ವಿವಿಯ ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ಜೆ.ಜೆ. ಕಟ್ಟಕಾಯಮ್ ಮಾತನಾಡಿ, ದೇಶದಲ್ಲಿ ಶೇ.6ರಷ್ಟು ವೃದ್ಧರು ದೈಹಿಕವಾಗಿ ಸದೃಢರಾಗಿರದೇ ಸಾವನ್ನಪ್ಪುತ್ತಿದ್ದು, ಹರೆಯ ವಯಸ್ಸಿನಲ್ಲಿ ಮದ್ಯ, ತಂಬಾಕು, ಗುಟಕಾ ಸೇರಿದಂತೆ ಮುಂತಾದ ದುಷ್ಚಟಗಳನ್ನು ಮಾಡುವುದರಿಂದ ಈ ರೀತಿಯ ಸಮಸ್ಯೆಗಳು ವೃದ್ಧಾಪ್ಯದಲ್ಲಿ ಕಂಡುಬರುತ್ತವೆ ಎಂದರು.
ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 22ರಷ್ಟು ಜನರು ಹಿರಿಯ ನಾಗರಿಕರಿದ್ದಾರೆ. ಆದರೆ, ಹೆಚ್ಚಿನ ವೃದ್ಧರು ಆರೋಗ್ಯ ಕುರಿತಾದ ಸಮಸ್ಯೆಗಳನ್ನು ಇಂದಿನ ದಿನಗಳಲ್ಲಿ ಹೆಚ್ಚು ಎದುರಿಸುತ್ತಿದ್ದು, ಅದರ ಕುರಿತು ಜಾಗೃತಿ ಮೂಡಿಸುವಲ್ಲಿ ಹೆಚ್ಚಿನ ಕಾರ್ಯವಾಗಬೇಕಿದೆ. ಅಲ್ಲದೇ ಸರ್ಕಾರದಿಂದ ವೃದ್ಧರಿಗೆ ಹಲವಾರು ರೀತಿಯ ಯೋಜನೆ ಹಾಗೂ ಸೌಲಭ್ಯಗಳು ಬರುತ್ತಿದ್ದರೂ ಅವುಗಳು ಸರಿಯಾದ ರೀತಿಯಲ್ಲಿ ಜನರಿಗೆ ತಲುಪುತ್ತಿಲ್ಲ. ಇವುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಬಹು ಮುಖ್ಯ ಎಂದರು.
ಹಿರಿಯ ನಾಗರಿಕರು ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಆಹಾರ ಸೇವನೆ ಹಾಗೂ ಯೋಗಾಭ್ಯಾಸಗಳನ್ನು ಮಾಡುವ ಅವಶ್ಯಕತೆ ಇದೆ. ಆದ್ದರಿಂದ ಇಂದಿನ ಯುವ ಸಮೂಹಕ್ಕೆ ಇವೆಲ್ಲವುಗಳು ಮಾದರಿಯಾಗಿದ್ದು, ಯುವ ವಯಸ್ಸಿನಲ್ಲಿ ಯಾವುದೇ ರೀತಿಯ ದುಷ್ಚಟಗಳನ್ನು ಅಂಟಿಸಿಕೊಳ್ಳದೇ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದರು. ಡಾ. ಎ.ಜಿ. ಮೂಡಬಿದರಿ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಮುಖ್ಯಸ್ಥರಾದ ಪ್ರೊ. ಜಯಶ್ರೀ ಇದ್ದರು. ಪ್ರೊ. ಎಸ್.ಸಿ. ಶೆಟ್ಟರ್ ಸ್ವಾಗತಿಸಿದರು. ಮೇಘಾ ದಢೂತಿ ನಿರೂಪಿಸಿದರು. ಡಾ. ಶೌಕತ್ ಅಜೀಂ ವಂದಿಸಿದರು.