ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪೊಲೀಸ್ ವರ್ಗಾವಣೆಗೆ ಲಾಬಿ ಶುರು

Lingaraj Badiger
Updated On : 24 May 2013, 11:19 am

ವಾರ್ತೆ, ಹುಬ್ಬಳ್ಳಿ, ಮೇ 23
ವರ್ಗಾವಣೆ ಎಂದ ಕೂಡಲೇ ಮೊಟ್ಟ ಮೊದಲ ನೋಟ ಪೊಲೀಸ್ ಇಲಾಖೆಯತ್ತ ಹೊರಳುತ್ತದೆ.
ಹೌದು, ಪೊಲೀಸ್ ಇಲಾಖೆಯಲ್ಲಿರುವಷ್ಟು ವರ್ಗಾವಣೆಯ ಲಾಬಿ ಇನ್ನಾವುದೇ ಇಲಾಖೆಯಲ್ಲಿರಲಿಕ್ಕಿಲ್ಲ. ಆಯಕಟ್ಟಿನ ಸ್ಥಾನಕ್ಕಾಗಿ ಇನ್ನಿಲ್ಲದ ಹರಸಾಹಸ ಈ ಇಲಾಖೆಯಲ್ಲಿ ನಡೆಯುತ್ತದೆ.
ಹೊಸ ಸರ್ಕಾರ ರಚನೆಯಾಗಿದ್ದೇ ತಡ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿಯೂ 'ಪೊಗದಸ್ತಾ'ದ ಠಾಣೆ ಆಯ್ದುಕೊಳ್ಳಲು ಭರ್ಜರಿ ಲಾಬಿ ನಡೆಯುತ್ತಿದೆ. ತಮಗೆ ಬೇಕಾದ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಅಧಿಕಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಚುನಾವಣೆಯ ಪೂರ್ವದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಮೂರು ವರ್ಷಗಳಿಂದ ಬೀಡು ಬಿಟ್ಟಿದ್ದ ಹಾಗೂ ಇದೇ ಜಿಲ್ಲೆಯವರೇ ಆದ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಚುನಾವಣೆಯ ಉದ್ದೇಶದಿಂದ ಈ ವರ್ಗಾವಣೆ ನಡೆದಿದ್ದರಿಂದ ಇದು ಒಂದೆರಡು ತಿಂಗಳಿಗೆ ಸೀಮಿತವಾಗಿತ್ತು ಎಂಬುದು ವಾಸ್ತವ.
ಹೊಸ ಸರ್ಕಾರ ಬಂದೊಡನೆಯೇ ಸ್ಥಳೀಯ ಶಾಸಕರು ಹಾಗೂ ಮಂತ್ರಿಗಳು ಹಿಡಿತ ಸಾಧಿಸಬೇಕೆಂಬ ಉದ್ದೇಶದಿಂದ ತಮಗೆ ಬೇಕಾದ ಪೊಲೀಸ್ ಅಧಿಕಾರಿಗಳನ್ನು ತಮ್ಮ ತಮ್ಮ ಕ್ಷೇತ್ರದ ವ್ಯಾಪ್ತಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಇದೇ ವೇಳೆ ರಾಜಕೀಯ ಪ್ರಭಾವ ಬಳಸಿ ಅಧಿಕಾರಿಗಳು ಆಯಕಟ್ಟಿನ ಠಾಣೆಗಳಿಗೆ ಸೇರಿಕೊಂಡು ಬಿಡುತ್ತಾರೆ. ಪ್ರಸ್ತುತ ಹೊಸ ಸರ್ಕಾರ ರಚನೆಯಾಗಿದ್ದೇ ತಡ ಈ ರೀತಿಯ ಪ್ರಕ್ರಿಯೆ ಶುರುವಾಗಿ ಬಿಟ್ಟಿದೆ.
ಹುಬ್ಬಳ್ಳಿ-ಧಾರವಾಡ ಕಮೀಷನರೇಟ್: ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಗೆ ವರ್ಗಾವಣೆಗಾಗಿ ಅಧಿಕಾರಿಗಳು ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಅದರಲ್ಲೂ ಚುನಾವಣೆಯ ಅಸ್ತ್ರದಿಂದಾಗಿ ಇಲ್ಲಿಂದ ಎತ್ತಂಗಡಿಯಾದವರು ಇಂಥ ಪ್ರಯತ್ನದಲ್ಲಿ ತೀರಾ ಮುಂದಿದ್ದಾರೆ. ಪೊಲೀಸ್ ಜಗತ್ತಿನ ಪ್ರಕಾರ ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ಭರ್ಜರಿ ಆದಾಯ ಗಿಟ್ಟಿವ ಜಾಗ. ಇಲ್ಲಿನ ಯಾವುದೇ ಒಂದು ಠಾಣೆಯಲ್ಲಿ ಒಂದಿಷ್ಟು ವರ್ಷ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದರೆ ಜೀವನ ಪೂರ್ತಿ 'ಧನ್ಯ' ಎನ್ನುವ ಮಾತು ಜಾಲ್ತಿಯಲ್ಲಿದೆ. ಈ ಕಾರಣದಿಂದಾಗಿ ಯಾವುದೇ ಬೆಲೆ ತೆತ್ತಾದರೂ ಸರಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ನುಸುಳಿಕೊಳ್ಳಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ನಗರ ಪೊಲೀಸ್ ಠಾಣೆ, ಕಮರಿಪೇಟೆ, ಸಬರ್‌ಮನ್ ಠಾಣೆ, ಹಳೇಹುಬ್ಬಳ್ಳಿ ಠಾಣೆಗೆ, ಧಾರವಾಡ ಸಬ್‌ಅರ್ಬನ್ ಠಾಣೆಗೆ ಬರಲು ಅಧಿಕಾರಿಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ.
ಅಂದ ಹಾಗೆ, ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಗೆ ಅಧಿಕಾರಿಗಳು ವರ್ಗ ಮಾಡಿಸಿಕೊಂಡು ಬರಲೂ ಸಕಾರಣವಿದೆ. ಅದೇನೆಂದರೆ ಹುಬ್ಬಳ್ಳಿಗೆ 'ಚೋಟಾ ಮುಂಬೈ' ಖ್ಯಾತಿ ಇದೆ. ಮುಂಬೈನಲ್ಲಿ ನಡೆಯುವ ಅರ್ಧದಷ್ಟು ಕಳ್ಳ ದಂಧೆಗಳು ಹುಬ್ಬಳ್ಳಿಯಲ್ಲಿ ನಡೆಯುತ್ತದೆ. ಕಮರಿಪೇಟೆಯ ಕಮಟು ಕಡಿಮೆಯಾಗಿದ್ದರೂ ಇನ್ನಿತರ ದಂಧೆಗಳು ಇಲ್ಲಿ ಇನ್ನೂ ಜೀವಂತ.
ಇಷ್ಟು ಸಾಲದು ಎಂಬಂತೆ ಬ್ರಾಂಡೆಡ್ ಕಂಪನಿಯ ಮೊಬೈಲ್, ಬಟ್ಟೆ, ಆಯಿಲ್ ತಯಾರಿಕೆಯಂತಹ ದಂಧೆಗಳೂ ಇವೆ. ಮಾದಕ ವಸ್ತುಗಳ ಮಾರಾಟವಂತೂ ಇಲ್ಲಿ ಯಾವುದೇ ಅಂಜಿಕೆ, ಅಳುಕಿಲ್ಲದೇ ನಡೆಯುತ್ತದೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಈ ದಂಧೆ ಮಟ್ಟ ಹಾಕಲು ಎಷ್ಟೇ ಪ್ರಯತ್ನಿಸಿದರೂ ಕೆಳ ಹಂತದ ಅಧಿಕಾರಿಗಳ ಅಭಯದಿಂದ ದಂಧೆಗಳು ನಿರಾತಂಕವಾಗಿ ನಡೆಯುತ್ತಿರುತ್ತದೆ. ಈ ದಂಧೆಯ ಬಗ್ಗೆ ಹಾಗೂ ದಂಧೆಯ ರುವಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರುವ ಅಧಿಕಾರಿಗಳು ಒಂದಿಷ್ಟು ಗಳಿಕೆಯ ಉದ್ದೇಶದಿಂದಲೇ ಹುಬ್ಬಳ್ಳಿಯತ್ತ ಮುಖ ಮಾಡಲು ಆಸಕ್ತಿ ಹೊಂದಿದ್ದಾರೆ.
ಮಂತ್ರಿ ಮನೆ ಗಿರಕಿ: ಆಯಕಟ್ಟಿನ ಸ್ಥಾನ ಗಟ್ಟಿಸಿಕೊಳ್ಳಲು ಇನ್ಸ್‌ಪೆಕ್ಟರ್ ಸೇರಿದಂತೆ ಕಳೆಹಂತದ ಅಧಿಕಾರಿಗಳು ಶಾಸಕ, ಮಂತ್ರಿಗಳ ಮನೆ ಗಿರಕಿ ಹೊಡೆಯಲು ಶುರು ಮಾಡಿದ್ದಾರೆ. ವರ್ಗಾವಣೆಗೆ ಕೈವೊಡ್ಡುವ ಅಧಿಕಾರಿಗಳಿಗೆಲ್ಲ ಶಾಸಕ-ಸಚಿವರು ಸಾಥ್ ನೀಡುವುದಿಲ್ಲ. ಯಾವೊಬ್ಬ ಇನ್ಸ್‌ಪೆಕ್ಟರ್ ಸೇರಿದಂತೆ ಕಳೆಹಂತದ ಅಧಿಕಾರಿಗಳ ವರ್ಗಾವಣೆಯಿಂದ ತಮಗಾಗುವ ಲಾಭ-ನಷ್ಟದ ವಿಚಾರವನ್ನು ಪ್ರತಿ ಶಾಸಕ-ಸಚಿವ ಲೆಕ್ಕಾಚಾರ ಹಾಕುವುದು ಸಹಜ. ವರ್ಗಾವಣೆಗಾಗಿ ಕೈವೊಡ್ಡುವ ಅಧಿಕಾರಿ ತಮ್ಮ ಜಾತಿಯವನಾಗಿದ್ದರೆ ಅಂತಹ ಅಧಿಕಾರಿಗೆ ವರ್ಗಾವಣೆಗೆ ಮೊದಲ ಪ್ರಾಶಸ್ತ್ಯ. ಇನ್ನೂ ಕೆಲ ಶಾಸಕರು ಜಾತಿ ಬಗ್ಗೆ ತಲೆ ಕೆಡಿಸಿಕೊಳ್ಳದೇ, ತನ್ನ ಸೂಚನೆಯನ್ನು ತಲೆ ಮೇಲೆ ಹೊತ್ತುಕೊಂಡು ಪಾಲಿಸುವ ಹಾಗೂ ಸಾಕಷ್ಟು ಹಣ ನೀಡುವ ಅಧಿಕಾರಿಯ ವರ್ಗಾವಣೆಗೂ ಶಿಫಾರಸ್ಸು ನಡೆಸಿದ ಉದಾಹರಣೆಗಳಿಗೇನೂ ಕಡಿಮೆ ಇಲ್ಲ.
ಸಾಕಷ್ಟು ಹಣ ನೀಡಿ, ಹುಬ್ಬಳ್ಳಿ-ಧಾರವಾಡ ಕಮೀಷನರೇಟ್‌ನ ಆಯಕಟ್ಟಿನ ಠಾಣೆಗೆ ಬಂದು ಕೂರುವ ಪೊಲೀಸ್ ಅಧಿಕಾರಿ ಸಹಜವಾಗಿಯೇ ತಾನು ತೆತ್ತ ದುಡ್ಡಿಗಿಂತ ಹೆಚ್ಚಿನ ಹಣ ಗಳಿಸಲು ಪ್ರಯತ್ನಿಸುವುದರಲ್ಲಿ ಎರಡು ಮಾತಿಲ್ಲ. ಜಾತಿ, ಹಣ, ವಸೂಲಿಗಳ ಪ್ರಭಾವದಿಂದ ಅವಳಿ ನಗರಕ್ಕೆ ಬರುವ ಪೊಲೀಸ್ ಅಧಿಕಾರಿಗಳಿಂದ ಪ್ರಾಮಾಣಿಕ ಸೇವೆ ನಿರೀಕ್ಷಿಸಲು ಸಾಧ್ಯವೇ?
- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement