ಅನುದಾನವಿದೆ, ಆದಾಯವಿದೆ, ಕೆಲಸ ಇಲ್ಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 24
ಒಂದು ಕಾಲದಲ್ಲಿ ಕೋಟಿ ರು. ಅನುದಾನಕ್ಕೂ ಅಂಗಲಾಚಬೇಕಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಇದೀಗ ಅನುದಾನದ ಹೊಳೆ ಹರಿದಿದೆ. ಅದರ ಜೊತೆಗೆ ಸ್ಥಳೀಯ ಆದಾಯವೂ ಹರಿದಿದೆ. ಆದರೆ, ನಾಗರಿಕರ ನೆಮ್ಮದಿಗೆ ಕಾರಣವಾಗಬೇಕಿದ್ದ ಕೆಲಸಗಳೇ ಆಗುತ್ತಿಲ್ಲ.
ಹೌದು! 2013-14ನೇ ಸಾಲಿನ ಮಹಾನಗರ ಪಾಲಿಕೆಯ ಆಯವ್ಯಯ ಪತ್ರದ ಮೇಲೆ ಕಣ್ಣಾಡಿಸಿದರೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ನೀಡುತ್ತಿರುವ ಅನುದಾನ ಮತ್ತು ಸ್ಥಳೀಯ ಆದಾಯಗಳನ್ನು ಕೂಡಿಸಿದರೆ ಹು-ಧಾ ಮಹಾನಗರ ಪಾಲಿಕೆಗೆ ಇಷ್ಟೊಂದು ಪ್ರಮಾಣದಲ್ಲಿ ಹಣ ಹರಿದು ಬರುತ್ತಿದೆಯೇ ಎಂದು ನಾಗರಿಕರು ಹೌಹಾರುವಂತಾಗಿದೆ. ಆದರೆ ಈ ಪ್ರಮಾಣದಲ್ಲಿ ಬರುತ್ತಿರುವ ಮೊತ್ತ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಮಾತ್ರ ಇಂದಿಗೂ ಚಿದಂಬರ ರಹಸ್ಯ.
ಅವಳಿ ನಗರಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊತ್ತುಕೊಂಡು ಹು-ಧಾ ಮಹಾನಗರ ಪಾಲಿಕೆ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿದರೆ ಯಾಕಾದರೂ ಇವರು ಅಭಿವೃದ್ಧಿ ರಸ್ತೆ ಅಗೆಯುವುದು ಮಾಡುತ್ತಾರೋ ಎನ್ನಿಸಿಬಿಟ್ಟಿದೆ.
2013-14ನೇ ಸಾಲಿನ ಪಾಲಿಕೆಯ ಬಜೆಟ್‌ನಲ್ಲಿ ಹು-ಧಾ ಮಹಾನಗರ ಪಾಲಿಕೆಗೆ 134.14 ಕೋಟಿ ಅನುದಾನ ರೂಪದಲ್ಲಿ ಮತ್ತು ರು. 247.6 ಕೋಟಿ ರಾಜಸ್ವ ಮತ್ತು ಬಂಡವಾಳ ಸ್ವೀಕೃತಿ ರೂಪದಲ್ಲಿ ಪಾಲಿಕೆಗೆ ಆದಾಯ ಬರಲಿದೆ ಇಷ್ಟೆಲ್ಲ ಇದ್ದರೂ ಅವಳಿ ನಗರದ ವ್ಯಾಪ್ತಿಯ ಒಳ ರಸ್ತೆಗಳನ್ನು ನೋಡಿದರೆ ಇದು ಹುಬ್ಬಳ್ಳಿನಾ, ಛೋಟಾ ಮುಂಬೈನಾ, ರಾಜ್ಯದ ವಾಣಿಜ್ಯ ರಾಜಧಾನಿಯಾ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ಇದೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ರಾಜ್ಯ ಸರ್ಕಾರದಿಂದ ಹರಿದು ಬಂದ ಯಥೇಚ್ಛ ಅನುದಾನ ಎಲ್ಲಿ ಮತ್ತು ಹೇಗೆ ಖರ್ಚಾಯಿತು ಎಂದು ತಿಳಿಯದಂತಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಗೆ ಮುನ್ನ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಆರಂಭವಾದ ಒಳಚರಂಡಿ ನಿರ್ಮಾಣ ಕಾಮಗಾರಿ ಇನ್ನೂ ಮುಗಿಯುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿಲ್ಲ.
ಹುಬ್ಬಳ್ಳಿನೋ ಧೂಳ್ ನಗರೋ?: ಇಂತಹದ್ದೊಂದು ಪ್ರಶ್ನೆ ಸಹಜವಾಗಿ ಹುಬ್ಬಳ್ಳಿ ನಗರದ ನಾಗಶೆಟ್ಟಿಕೊಪ್ಪ, ಲೋಕಪ್ಪನ ಹಕ್ಕಲ, ದೇಶಪಾಂಡೆ ನಗರ, ಜೆ.ಸಿ. ನಗರ ಬಡಾವಣೆಗಳಲ್ಲಿ ಸ್ವಲ್ಪ ಹೊತ್ತು ತಿರುಗಿದರೆ ಉದ್ಭವವಾಗುತ್ತದೆ. ಒಳಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾದ ಬಹುತೇಕ ಪ್ರದೇಶದಲ್ಲಿ ಇಡೀ ರಸ್ತೆಯನ್ನು ಉದ್ದಕ್ಕೂ ಅಗೆದು ಚರಂಡಿ ಪೈಪ್‌ಗಳನ್ನು ಹಾಕಲಾಗಿದೆ. ಡಾಂಬರು ರಸ್ತೆಯನ್ನು ಅಗೆದ ಕಾರಣ ಹುಬ್ಬಳ್ಳಿಯ ಖಡಕ್ ಬಿಸಿಲಿನ ಜೊತೆಗೆ ಧೂಳಿನ ಸ್ನಾನ ಮಾಡಬೇಕಾದ ಪರಿಸ್ಥಿತಿ ಸುತ್ತಲಿನ ನಿವಾಸಿಗಳಿಗೆ ಸೇರಿದಂತೆ ವಾಹನ ಸವಾರರಿಗೂ ಎದುರಾಗಿದೆ.
ಧೂಳಿಗಿಲ್ಲವೇ ಮುಕ್ತಿ?: ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡಿರುವ ಪ್ರದೇಶದಲ್ಲಿ ಅಗೆದಿರುವ ರಸ್ತೆಗಳಿಂದ ಏಳುತ್ತಿರುವ ಧೂಳನ್ನು ತಪ್ಪಿಸಬೇಕಾದರೆ ಮತ್ತೆ ರಸ್ತೆಗಳ ಡಾಂಬರಿಕರಣವಾಗಬೇಕು ಆದರೆ ಈ ಕೆಲಸ ಮಾಡಬೇಕಾದ ಮಹಾನಗರ ಪಾಲಿಕೆ ಸುಮ್ಮನೆ ಕುಳಿತಿದೆ. 13ನೇ ಹಣಕಾಸು ಯೋಜನೆಯಲ್ಲೂ ರಸ್ತೆ ಸುಧಾರಣೆ ಮತ್ತು ಡಾಂಬರಿಕರಣಕ್ಕೆ ಮಹಾನಗರ ಪಾಲಿಕೆ ಅನುದಾನ ಮೀಸಲು ಇರಿಸಿಲ್ಲ. ಹೀಗಾಗಿ ಮುಂದಿನ ಬಜೆಟ್‌ನಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ನಿಗದಿಯಾಗುವವರೆಗೂ ಹುಬ್ಬಳ್ಳಿ ನಿವಾಸಿಗಳು ಬೇಸಿಗೆ ಮತ್ತು ಚಳಿಗಾಲದಲ್ಲಿ ಧೂಳಿನ ಸ್ನಾನ ಮತ್ತು ಮಳೆಗಾಲದಲ್ಲಿ ಕೆಸರಿನ ಸ್ನಾನ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಸತೀಶ ಪಾಗಾದ