ಉರ್ದು ವಿಭಾಗ ತೆರವಿಗೆ ಮುಸ್ಲಿಂ ಮುಖಂಡರ ವಿರೋಧ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 24
ಇತ್ತಿಚೇಗೆ ನಡೆದ ಕವಿವಿ ಸಿಂಡಿಕೇಟ್ ಸಭೆಯಲ್ಲಿ ಉರ್ದು ಸೇರಿದಂತೆ ಸಣ್ಣ ವಿಭಾಗಗಳನ್ನು ತೆರವುಗೊಳಿಸುವ ನಿರ್ಣಯ ವಿಷಾಧನೀಯ. ಈ ನಿರ್ಣಯವನ್ನು ಕೈ ಬಿಡಬೇಕು ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರ ನೇತೃತ್ವದಲ್ಲಿ ಸಂಸ್ಥೆ ಸದಸ್ಯರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಶುಕ್ರವಾರ ಕವಿವಿ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಉರ್ದು ಭಾಷೆ ಮುಸ್ಲಿಂ ಸಮುದಾಯದ ಮಾತೃಭಾಷೆಯಾಗಿದ್ದು, ರಾಜ್ಯದಲ್ಲಿ ಅತಿಹೆಚ್ಚು ಮಾತನಾಡುವ ದ್ವಿತೀಯ ಭಾಷೆಯಾಗಿದೆ. ರಾಜ್ಯದಲ್ಲಿ ಅನೇಕ ಉರ್ದು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಿದ್ದು, ವಿದ್ಯಾರ್ಥಿಗಳು ಉರ್ದು ಶಾಲೆಗಳಲ್ಲಿ ಓದುತ್ತಿದ್ದಾರೆ. ಅಲ್ಲದೇ, ಅನೇಕ ವಿದ್ಯಾರ್ಥಿಗಳು ಕಾಲೇಜಗಳಲ್ಲಿ ಉರ್ದು ಐಚ್ಚಿಕ ಭಾಷೆಗಳನ್ನು ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಭಾರತ ಸರ್ಕಾರ ಉರ್ದು ಭಾಷೆಯನ್ನು ಭಾರತದ ಸೌಂಸ್ಕೃತಿಕ ಭಾಷೆಯಾಗಿ ಘೋಷಿಸಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉರ್ದು ಭಾಷೆಯನ್ನು ರಕ್ಷಿಸಬೇಕಿದೆ. ಉರ್ದು ವಿಭಾಗ ಕವಿವಿಯ ಅತಿ ಹಳೆಯ ವಿಭಾಗವಾಗಿದ್ದು, ತೆರವುಗೊಳಿಸುವ ನಿರ್ಧಾರ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ ಖಲೀಲ್ ಅಹ್ಮದ ದಾಸನಕೊಪ್ಪ, ಪ್ರೊ. ಎಸ್.ಎ. ಸರಗಿರೋ, ಬಿ.ಎ. ಜಾಹಗೀರದಾರ, ಡಾ. ಯು.ಆರ್. ಮಸೋತಿ, ಮಖಬೂಲ್ ಸಂಗ್ರೇಸಕೊಪ್ಪ, ಅಬುತಾಹೀರ್ ಸರಗಿರೋ, ಎಸ್.ಎಸ್. ಸೌದಾಗರ, ಇರ್ಷಾದ್ ಬಿಸ್ತಿ, ಐ.ಎಚ್. ಶಿವಳ್ಳಿ, ರಶೀದ ಚಕ್ಕೂಲಿ, ಜಬ್ಬಾರ ನಿಪ್ಪಾಣಿ ಮುಂತಾದವರು ಇದ್ದರು.