ಕಲಘಟಗಿ ಕಾಡಿನಲ್ಲಿ ಬೇಟೆಗಾರರ ಬಿಡಾರ; ಸ್ಥಳೀಯರು, ಅರಣ್ಯ ಇಲಾಖೆ ಸಹಕಾರ: ಆರೋಪ
ಕಲಘಟಗಿ: ತಾಲೂಕಿನ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನು ಹಾಗೂ ಮನೆಗಳಲ್ಲಿ ಕಾಡು ಹಂದಿ, ಜಿಂಕೆ, ಇನ್ನಿತರೆ ವನ್ಯ ಜೀವಿ ಬೇಟೆಗಾರರು ಬಿಡಾರ ಹೂಡಿದ್ದು ಅಲ್ಲಿನ ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಅಸಮರ್ಪಕ ಮಳೆಯಿಂದಾಗಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯಲು ನೀರಿಲ್ಲದೆ ಕಾಡಿನಿಂದ ನಾಡಿಗೆ ಬರುವುದನ್ನು ವರದಾನವನ್ನಾಗಿ ಮಾಡಿಕೊಂಡ ಈ ಬೇಟೆಗಾರರು ಸ್ಥಳೀಯ ಬೇಟೆಗಾರರು ಹಾಗೂ ಕೆಲ ಅರಣ್ಯ ಸಿಬ್ಬಂದಿ ಸಹಕಾರದೊಂದಿಗೆ ಹೊರ ಜಿಲ್ಲೆಗಳಿಂದ ಬಂದು ಬಿಡಾರ ಹೂಡಿದ್ದಾರೆ. ವನ್ಯ ಪ್ರಾಣಿಗಳ ಮಾಂಸ, ಚರ್ಮವನ್ನು ರಾಜಧಾನಿ ಸೇರಿದಂತೆ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆಂದು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹುಲಗಿನಕೊಪ್ಪ, ಜುಂಜನಬೈಲ, ಡಿಂಬವಳ್ಳಿ, ಬೆಂಡಲಗಟ್ಟಿ, ದೇವಿಕೊಪ್ಪ, ತಂಬೂರ, ಗಳಗಿಹುಲಕೊಪ್ಪ ಗ್ರಾಮಗಳಲ್ಲಿನ ರೈತರು, ಕೃಷಿ ಕಾರ್ಮಿಕರು, ದನಗಾಯಿಗಳು ಪತ್ರಿಕೆಗೆ ತಿಳಿಸಿದ್ದಾರೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜನರಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬಾರದೆಂದು ಎಚ್ಚರಿಕೆಯ ನೀಡಿ ಜಿಂಕೆ ಮಾಂಸ ಪ್ರತಿ ಕೆಜಿಗೆ ರು. 400- 500, ಕಾಡಹಂದಿ ಮಾಂಸ ರು. 300 ಪ್ರತಿ ಕೆಜಿಗೆ ಮಾರಾಟ ಮಾಡುತ್ತಿದ್ದು, ಪಟ್ಟಣದ ಕೆಲವು ಮಾಂಸಹಾರ ಅಂಗಡಿಗಳಲ್ಲಿಯೂ ಇದು ಮಾರಾಟವಾಗುತ್ತಿದ್ದು ಅರಣ್ಯ ಇಲಾಖೆಯವರಿಗೆ ಗಮನಕ್ಕೆ ಬಂದರೂ ಏಕೆ ಮೌನವಿದ್ದಾರೆಂದು ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನಿನ ರೈತರು ತಮ್ಮ ಹೆಸರನ್ನು ಹೇಳಲಿಚ್ಛಿಸದೆ ಪತ್ರಿಕೆಯ ಮುಂದೆ ದೂರಿಕೊಂಡಿದ್ದಾರೆ.